Friday, June 14, 2024
spot_img
More

    Latest Posts

    ಸಿಂದಗಿಯಿಂದ ಶುರು.. ಡಾ.ಹೆಬ್ಬಿ ರಾಜಕೀಯ ಜಿಂದಗಿ; ಮೊಬೈಲ್‌ ಡಾಕ್ಟರ್‌ ಈಗ ಎಮ್‌ಎಲ್‌ಎ ಅಭ್ಯರ್ಥಿ..

    ಬೆಂಗಳೂರು: ಕಡುಬಡವರಿಗೆ ಅವರಿದ್ದ ಸ್ಥಳಕ್ಕೇ ಹೋಗಿ ಉಚಿತವಾಗಿಯೇ ಚಿಕಿತ್ಸೆ ನೀಡುತ್ತ, ಮೊಬೈಲ್‌ ಡಾಕ್ಟರ್‌ ಎಂದೇ ಹೆಸರಾಗಿರುವ ಡಾ. ಸುನೀಲ್‌ಕುಮಾರ್‌ ಹೆಬ್ಬಿ ಅವರ ಸಾಮಾಜಿಕ ಜೀವನ ಮತ್ತೊಂದು ಮಜಲಿಗೆ ತಲುಪಿದೆ. ವೈದ್ಯಕೀಯ ಕ್ಷೇತ್ರದಿಂದ ಅವರೀಗ ರಾಜಕೀಯ ಕ್ಷೇತ್ರದತ್ತಲೂ ಹೊರಳಿದ್ದು, ಅವರ ರಾಜಕೀಯ ಜಿಂದಗಿ ವಿಜಯಪುರ ಜಿಲ್ಲೆಯ ಸಿಂದಗಿಯಿಂದ ಶುರುವಾಗಿದೆ.

    ಈಗಾಗಲೇ ಸಾಮಾಜಿಕ ಚಟುವಟಿಕೆಯಲ್ಲಿ ಇರುವ ರವಿಕೃಷ್ಣಾರೆಡ್ಡಿ ಅವರೊಂದಿಗೆ ಈ ಮೊದಲಿನಿಂದಲೂ ಸಂಪರ್ಕದಲ್ಲಿರುವ ಡಾ. ಸುನೀಲ್‌ಕುಮಾರ್‌ ಹೆಬ್ಬಿ, ರವಿಕೃಷ್ಣಾರೆಡ್ಡಿ ಅವರು ಸ್ಥಾಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷಕ್ಕೆ ಸೇರುವ ಮೂಲಕ ಅಧಿಕೃತವಾಗಿ ರಾಜಕೀಯ ಚಟುವಟಿಕೆಗೆ ಪ್ರವೇಶಿಸಿದ್ದಾರೆ.

    ಡಾ. ಸುನೀಲ್‌ಕುಮಾರ್‌ ಹೆಬ್ಬಿ

    ರವಿಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ಇಂದು ಕೆಆರ್‌ಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಡಾ. ಸುನೀಲ್‌ಕುಮಾರ್‌ ಹೆಬ್ಬಿ, ಅಕ್ಟೋಬರ್‌ 30ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾತೃಸಿರಿ ಫೌಂಡೇಷನ್‌ ಸ್ಥಾಪಿಸಿ ಆ ಮೂಲಕ ಬಡವರ ಸೇವೆ ಮಾಡುತ್ತಿರುವ ಡಾ.ಹೆಬ್ಬಿ, ರಾಜಕೀಯ ಮುಖೇನ ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡುವ ಗುರಿ ಇರಿಸಿಕೊಂಡಿದ್ದಾರೆ.

    ಸಂಸ್ಥಾಪಕ ರವಿಕೃಷ್ಣಾರೆಡ್ಡಿ ಸಮ್ಮುಖದಲ್ಲಿ ಕೆಆರ್‌ಎಸ್‌ ಪಕ್ಷಕ್ಕೆ ಸೇರಿದ ಡಾ.ಸುನೀಲ್‌ಕುಮಾರ್‌ ಹೆಬ್ಬಿ

    ʼಅವಕಾಶ ಸಿಕ್ಕಾಗ ಬಡವರ ಹೃದಯದಲ್ಲಿ ಸ್ಥಳ ಮಾಡಿಕೊಳ್ಳಬೇಕುʼ ಎನ್ನುವ ಡಾ.ಹೆಬ್ಬಿ, ವಿಶ್ವ ಹೃದಯ ದಿನದಂದೇ ರಾಜಕೀಯಕ್ಕೆ ಧುಮುಕಿದ್ದಾರೆ. ʼಪ್ರಾಮಾಣಿಕ ರಾಜಕೀಯ ನನ್ನ ಗುರಿʼ ಎನ್ನುವ ಹೆಬ್ಬಿ, ತಮ್ಮ ಇದುವರೆಗಿನ ಸೇವೆಗೆ ಯಾವುದೇ ರಾಜಕೀಯ ಸೋಂಕಿಲ್ಲ ಎಂಬುದನ್ನೂ ಹೇಳುತ್ತಾರೆ.

    ರವಿಕೃಷ್ಣಾರೆಡ್ಡಿ ಅವರಿಗೆ ಅಭಿನಂದನೆ

    ಗಾಣಿಗ ಸಮುದಾಯದವರಾದ ಡಾ.ಸುನೀಲ್‌ಕುಮಾರ್‌ ಹೆಬ್ಬಿಯವರು ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.70ರಷ್ಟು ಗಾಣಿಗ ಸಮುದಾಯದವರು ಇರುವುದು ತಮ್ಮ ಸ್ಪರ್ಧೆಗೆ ಪೂರಕವಾಗಿರಲಿದೆ ಎಂಬ ಆಶಯವನ್ನೂ ಹೊಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ, ಗಾಣಿಗ ಸಮಾಜದ ರಾಷ್ಟ್ರಮಟ್ಟದ ಮುಖಂಡ ಪ್ರಹ್ಲಾದ್‌ ಮೋದಿ ಅವರಿಂದ ಡಾ.ಹೆಬ್ಬಿ ಅವರು ಗಾನ ವಿದ್ಯಾ ರತ್ನ ಪ್ರಶಸ್ತಿ ಸ್ವೀಕರಿಸಿದ್ದ ಕ್ಷಣ. ಎಚ್‌ಆರ್‌ಡಿಎಫ್‌ನ ಜಿ.ಕೆ.ಆದರ್ಶ್‌ ಮುಂತಾದವರು ಉಪಸ್ಥಿತರಿದ್ದರು.

    ರಾಜಕೀಯಕ್ಕೆ ಬರುವ ಬಯಕೆ ಮೊದಲಿಂದೇನೂ ಇರಲಿಲ್ಲ. ರಾಜಕಾರಣಕ್ಕೆ ಬರುವ ಉದ್ದೇಶದಿಂದ ಸಾಮಾಜಿಕ ಸೇವೆಗೂ ಇಳಿದಿರಲಿಲ್ಲ. ಆದರೆ ಭ್ರಷ್ಟಾಚಾರವನ್ನು ನೋಡಿ ನೋಡಿ ಬೇಸರವಾಗಿ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧಾರ ಮಾಡಿದೆ.

    | ಡಾ.ಸುನೀಲ್‌ಕುಮಾರ್‌ ಹೆಬ್ಬಿ ಸಂಸ್ಥಾಪಕ, ಮಾತೃಸಿರಿ ಫೌಂಡೇಷನ್‌

    ವೈದ್ಯನಾಗಿ ಸಲ್ಲಿಸಿದ್ದ ಸಾಮಾಜಿಕ ಸೇವೆಗೆ ಸಂದ ಪ್ರಶಸ್ತಿ-ಪುರಸ್ಕಾರಗಳೊಂದಿಗೆ ಡಾ.ಸುನೀಲ್‌ಕುಮಾರ್‌ ಹೆಬ್ಬಿ

    ಸಂಬಂಧಿತ ಸುದ್ದಿ: ಉದ್ಯೋಗ ತೊರೆದು ಜನಸೇವೆ ಮಾಡುತ್ತಿರುವ ವೈದ್ಯ ಮಹಾಶಯ ಡಾ. ಸುನೀಲ್ ಕುಮಾರ್ ಹೆಬ್ಬಿ

    ಸಂಬಂಧಿತ ಸುದ್ದಿ: ಡಾ. ಸುನೀಲ್‌ ಕುಮಾರ್‌ ಹೆಬ್ಬಿ ಅವರಿಂದ ಕಡುಬಡವರಿಗೆ ಆಹಾರ ಸೇವೆ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!