Friday, May 17, 2024
spot_img
More

    Latest Posts

    ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಸೇವೆ 12 ಜಿಲ್ಲೆಗಳಿಗೆ ವಿಸ್ತರಣೆ

    ಬೆಂಗಳೂರು: ಗಾಣಿಗ ಸಮುದಾಯದ ಸಂಘಟನೆ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇರುವ ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಕಳೆದ ಒಂದು ವರ್ಷದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಈ ಮೂಲಕ ಟ್ರಸ್ಟ್‌ ರಾಜ್ಯದ 12 ಜಿಲ್ಲೆಗಳಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವಂತಾಗಿದೆ. 2020-21ನೇ ಸಾಲಿನಲ್ಲಿನ ಟ್ರಸ್ಟ್‌ನ ಸಾಧನೆಯ ವಿವರವನ್ನು ಪ್ರಕಟಿಸಿರುವ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ, ನಿವೃತ್ತ ಕೆಎಎಸ್‌ ಅಧಿಕಾರಿ ಆರ್. ನಾಗರಾಜ ಶೆಟ್ಟಿ ಅವರು ಈ ವಿಷಯ ತಿಳಿಸಿದ್ದಾರೆ.

    ಪ್ರಸ್ತುತ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ,  ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸುವ ಗುರಿಯನ್ನು ಟ್ರಸ್ಟ್‌ ಇರಿಸಿಕೊಂಡಿದೆ. ಈ ಹಿಂದೆ ಐದು ಜಿಲ್ಲೆಗಳಲ್ಲಷ್ಟೇ ತನ್ನ ಕಾರ್ಯವ್ಯಾಪ್ತಿ ಹೊಂದಿದ್ದ ಟ್ರಸ್ಟ್‌ ಇದೀಗ 12 ಜಿಲ್ಲೆಗಳಿಗೆ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

    ಶ್ರೀ ಗಾಣಿಗ ಎಜುಕೇಷನಲ್​ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ ಆರ್. ನಾಗರಾಜ ಶೆಟ್ಟಿ.

    2020ರ ಡಿಸೆಂಬರ್‌ನಲ್ಲಿ ಮೈಸೂರಿನ ದೇವಾಂಬ ಅಗ್ರಹಾರದ ಸೀತಾ ಕಲ್ಯಾಣಮಂಟಪದಲ್ಲಿ ಸಂಘಟನಾ ಕಾರ್ಯದರ್ಶಿಗಳ ಸಭೆ ಹಾಗೂ ವಿದ್ಯಾರ್ಥಿಗಳಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲದೆ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ-ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿಯ 32 ಹಾಗೂ ಪಿಯುಸಿಯ 26 ಸೇರಿ ಒಟ್ಟು 58 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನಡೆಸಲಾಗಿದೆ. ಇದರಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿದ್ದರು ಎಂದು ಅವರು ತಿಳಿಸಿದ್ದಾರೆ.

    ಹೆಚ್ಚಿನ ವಿವರಕ್ಕಾಗಿ ಈ ಲಿಂಕ್‌ ಕ್ಲಿಕ್ಕಿಸಿ: ನಾಲ್ಕು ಜಿಲ್ಲೆಗಳ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

    2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಗಾಣಿಗ ಸಮಾಜದ ವಿದ್ಯಾರ್ಥಿಗಳನ್ನು ಕೋಲಾರದ ಜ್ಯೋತಿ ಎಜುಕೇಷನಲ್‌ ಟ್ರಸ್ಟ್‌ ಸಭಾಂಗಣದಲ್ಲಿ ಆ ಟ್ರಸ್ಟ್‌ನ ಸಹಯೋಗದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಆ ಪೈಕಿ ಎಸ್‌ಎಸ್‌ಎಲ್‌ಸಿಯ 40, ಪಿಯುಸಿಯ 38 ಸೇರಿ 78 ಪ್ರತಿಭಾವಂತ ವಿದ್ಯಾರ್ಥಿಗಳಿದ್ದರು ಎಂದು ಅವರು ತಿಳಿಸಿದ್ದಾರೆ.

    ಹೆಚ್ಚಿನ ವಿವರಕ್ಕಾಗಿ ಈ ಲಿಂಕ್‌ ಕ್ಲಿಕ್ಕಿಸಿ: ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

    2020ರ ಡಿಸೆಂಬರ್‌ 25ರಂದು ನೆಲಮಂಗಲದ ಸೊಂಡೆಕೊಪ್ಪ ಬೈಪಾಸ್‌ ಸರ್ಕಲ್‌ ಬಳಿಯ ಗಾಣಿಗರ ಸಮುದಾಯ ಭವನದಲ್ಲಿ ಟ್ರಸ್ಟೀಗಳ ವಾರ್ಷಿಕ ಸಭೆ, ವಿದ್ಯಾರ್ಥಿ ಜಾಗೃತಿ ಸಭೆ ಆಯೋಜಿಸಲಾಗಿದ್ದು, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗಿದೆ. ಆ ವೇಳೆ ಎಸ್‌ಎಸ್‌ಎಲ್‌ಸಿಯ 68, ಪಿಯುಸಿಯ 47 ಸೇರಿ 115 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ.

    ಹೆಚ್ಚಿನ ವಿವರಕ್ಕಾಗಿ ಈ ಲಿಂಕ್‌ ಕ್ಲಿಕ್ಕಿಸಿ: ಎಸ್‌ಜಿಇಸಿಟಿ ಮಹಾಸಭೆ, ನೂರಾರು ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ‘ವಿದ್ಯಾಜ್ಯೋತಿ’ ಪ್ರಶಸ್ತಿ ಪ್ರದಾನ

    2021ರ ಫೆಬ್ರವರಿ 14ರಲ್ಲಿ ಶಿವಮೊಗ್ಗದ ಆರ್‌ಎಂಎಲ್‌ ನಗರದಲ್ಲಿ ಇರುವ ಮಾನಸಾ ಶಾಲೆಯಲ್ಲಿ ವಿದ್ಯಾರ್ಥಿ ಜಾಗೃತಿ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯ 6 ಹಾಗೂ ಪಿಯುಸಿಯ 6 ಸೇರಿ ಗಾಣಿಗ ಸಮಾಜ ಒಟ್ಟು 12 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು.

    ವಿದ್ಯಾಶ್ರಯ, ಕೆಎಎಸ್‌-ಐಎಎಸ್‌ ಕೋಚ್‌

    ಟ್ರಸ್ಟ್‌ 2020-21ನೇ ಸಾಲಿನಲ್ಲಿ ಕೈಗೊಂಡ ಮಹತ್ವದ ಕಾರ್ಯಕ್ರಮಗಳಲ್ಲಿ ಅತ್ಯಂತ ಪ್ರಮುಖವಾದದ್ದೆಂದರೆ ವಿದ್ಯಾಶ್ರಯ ಯೋಜನೆ ಮತ್ತು ಕೆಎಎಸ್‌-ಐಎಎಸ್‌ ಕೋಚಿಂಗ್.‌ ವಿದ್ಯಾಶ್ರಯ ಯೋಜನೆಯಡಿ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಎಂ. ದುಷ್ಯಂತ್ ಹಾಗೂ ಡಿ.ಎಂ. ಪೃಥ್ವಿರಾಜ್‌ ಅವರಿಗೆ ಶೇ.50ರಷ್ಟು ಟ್ಯೂಷನ್‌ ಫೀ ಒದಗಿಸಲಾಗಿತ್ತು. ಯಶವಂತಪುರದ ಪೀಪಲ್‌ ಟ್ರೀ ಹಾಸ್ಪಿಟಲ್‌ ಸಿಇಒ, ಗಾಣಿಗ ಸಮಾಜದವರೇ ಆಗಿರುವ ಡಾ.ಎಸ್.ಜ್ಯೋತಿ ನೀರಜಾ ಅವರು ಈ ಮೊತ್ತದ ಪ್ರಾಯೋಜಕತ್ವ ವಹಿಸಿದ್ದರು.

    ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಗಾಣಿಗ ಸಮಾಜದ ಪ್ರತಿಭಾವಂತ 19 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಇಂಡಿಯಾ ಫಾರ್‌ ಐಎಎಸ್‌ ಅಕಾಡೆಮಿ (INDIA 4 IAS Academy) ಮೂಲಕ ಕೋಚಿಂಗ್‌ ವ್ಯವಸ್ಥೆಯನ್ನೂ ಮಾಡಿದೆ. ಈ 19 ವಿದ್ಯಾರ್ಥಿಗಳು ಇಂಡಿಯಾ ಫಾರ್‌ ಐಎಎಸ್‌ ಅಕಾಡೆಮಿ ಮೂಲಕ ಕೆಎಎಸ್‌/ಐಎಎಸ್‌ ಕೋಚಿಂಗ್‌ ಪಡೆಯುತ್ತಿದ್ದಾರೆ ಎಂದು ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಆರ್.ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಹೆಚ್ಚಿನ ವಿವರಕ್ಕಾಗಿ ಈ ಲಿಂಕ್‌ ಕ್ಲಿಕ್ಕಿಸಿ: ಎಸ್​ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್​ಸಿ/ಕೆಪಿಎಸ್​ಸಿ ತರಬೇತಿ

    ಸಂಬಂಧಿತ ಸುದ್ದಿ: ಆದಿಕವಿ‌ ಪಂಪನ‌ ಜನ್ಮಸ್ಥಳದಲ್ಲಿ ಸ್ಥಾಪನೆಯಾಯಿತು ನೂತನ ಗಾಣಿಗ ಸಂಘ

    ಸಂಬಂಧಿತ ಸುದ್ದಿ: ಕರ್ನಾಟಕ-ಕೇರಳ ಗಡಿಭಾಗದ ಕಾಸರಗೋಡಿನಲ್ಲೂ ಅಸ್ತಿತ್ವಕ್ಕೆ ಬಂತೊಂದು ಗಾಣಿಗ ಸಂಘಟನೆ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!