Friday, May 17, 2024
spot_img
More

    Latest Posts

    ಥಾಣೆ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ರಜತ ಮಹೋತ್ಸವ; ಗೋಪಾಲಕೃಷ್ಣ ಗಾಣಿಗರಿಂದ ಉದ್ಘಾಟನೆ

    ಬೆಂಗಳೂರು: ಮಹಾರಾಷ್ಟ್ರದ ಥಾಣೆಯಲ್ಲಿರುವ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ರಜತ ಮಹೋತ್ಸವ ಆಚರಿಸಿದ್ದು, ಈ ಸಮಾರಂಭವನ್ನು ಥಾಣೆಯಲ್ಲಿರುವ ಉದ್ಯಮಿ, ಮುಂಬೈ ಗಾಣಿಗ ಸಮಾಜದ ಸದಸ್ಯ ಗಂಗೊಳ್ಳಿ ಗೋಪಾಲಕೃಷ್ಣ ಗೋವಿಂದ ಗಾಣಿಗ ಅವರು ಉದ್ಘಾಟಿಸಿದರು.

    ಈ ಬ್ಯಾಂಕ್‌ 25 ವರ್ಷಗಳನ್ನು ಪೂರೈಸಿದ್ದು, ಥಾಣೆಯ ಮೀರಾ ರಸ್ತೆಯಲ್ಲಿರುವ ಶಾಖೆಯಲ್ಲಿ ಇತ್ತೀಚೆಗೆ ಇದರ ರಜತ ಮಹೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭವನ್ನು ಗೋಪಾಲಕೃಷ್ಣ ಗಾಣಿಗ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

    ಗಂಗೊಳ್ಳಿ ಗೋಪಾಲಕೃಷ್ಣ ಗೋವಿಂದ ಗಾಣಿಗ ಅವರು ಥಾಣೆಯಲ್ಲಿ 4G ಎಂದೇ ಗುರುತಿಸಿಕೊಂಡಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿಯವರಾದ ಇವರು ಥಾಣೆಯಲ್ಲಿ ರಿಪೇರ್ಸ್‌ ಆ್ಯಂಡ್ ರಿಹ್ಯಾಬಿಲಿಟೇಷನ್‌ ಕಾಂಟ್ರಾಕ್ಟರ್‌ ಆಗಿರುತ್ತಾರೆ. ವೃತ್ತಿಯ ಜೊತೆಗೆ ಹಲವಾರು ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಇವರು ಮೀರಾ-ಭಾಯಂದರ್‌ನ ಶ್ರೀ ನಿತ್ಯಾನಂದ ಸೇವಾ ಸಂಸ್ಥಾ (ರಿ.) ಇದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಧಾಕೃಷ್ಣ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮುಂಬೈ ಗಾಣಿಗ ಸಮಾಜದ ಸದಸ್ಯರಾಗಿರುವ ಇವರು, ಮೀರಾರೋಡ್‌ ತುಳುನಾಡ ಸೇವಾ ಸಮಾಜದ ಅಧ್ಯಕ್ಷರೂ ಆಗಿರುತ್ತಾರೆ.

    ಕಿರುಪರಿಚಯ: ಗಂಗೊಳ್ಳಿಯ ಗೋವಿಂದ ಗಾಣಿಗ-ಲಕ್ಷ್ಮಿ ಗಾಣಿಗ ದಂಪತಿಯ ಆರು ಮಂದಿ ಮಕ್ಕಳಲ್ಲಿ ಕಿರಿಯವರಾದ ಗೋಪಾಲಕೃಷ್ಣ ಗಾಣಿಗ ಅವರು 1963ರ ಡಿ. 14ರಂದು ಜನಿಸಿದ್ದರು. ಗಂಗೊಳ್ಳಿಯ ಎಸ್‌.ವಿ. ಜೂನಿಯರ್‌ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ವಿದ್ಯಾಭ್ಯಾಸ ಮಾಡಿದ ಇವರು, ಅಂದು ಆರ್ಥಿಕ ಅಡಚಣೆಯಿಂದಾಗಿ ಊರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಗಿರಲಿಲ್ಲ.

    ಗಂಗೊಳ್ಳಿ ಗೋಪಾಲಕೃಷ್ಣ ಗೋವಿಂದ ಗಾಣಿಗ

    ಹೀಗಾಗಿ 1982ರಲ್ಲಿ ಮುಂಬೈಗೆ ತೆರಳಿದ ಇವರು ಅಲ್ಲಿ ಸೆಂಟ್ರಲ್‌ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದ ಬಾವ ಮಂಜುನಾಥ ಗಾಣಿಗರ ಆಶ್ರಯ ಪಡೆಯುತ್ತಾರೆ. ಅಕ್ಕ-ಬಾವನ ಆಸರೆಯಲ್ಲಿದ್ದುಕೊಂಡು, ಬೊರಿವಿಲಿಯ ಶ್ರೀಧರ ಶೆಟ್ಟಿ ಅವರು ಜಯರಾಜ್‌ ಬಿಲ್ಡರ್ಸ್‌ ಕಚೇರಿಯಲ್ಲಿ ಟೈಪಿಸ್ಟ್‌-ಕ್ಲರ್ಕ್‌ ಆಗಿ ದುಡಿಯತ್ತ, ರಾತ್ರಿ ಗೋರೆಗಾಂವ್‌ನ ಸರಸ್ವತಿ ನೈಟ್‌ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತ ಪಿಯುಸಿ ಮುಗಿಸುತ್ತಾರೆ. ನಂತರ ಗೋರೆಗಾಂವ್‌ನ ಪಾಟ್ಕರ್‌ ಕಾಲೇಜಿನಲ್ಲಿ ಬಿಕಾಂ ಪದವೀಧರರಾಗುತ್ತಾರೆ.

    ಜಯರಾಜ್‌ ಬಿಲ್ಡರ್ಸ್‌ನಲ್ಲಿ 8 ವರ್ಷ ದುಡಿದ ಅನುಭವದಿಂದ ಇವರು ಮೆಸರ್ಸ್‌ ಗೋಕುಲ್‌ ಎಂಟರ್‌ಪ್ರೈಸಸ್‌ ಎಂಬ ತಮ್ಮದೇ ಆದ ಬಿಲ್ಡಿಂಗ್‌ ರಿಪೇರರ್‌ ಉದ್ಯಮ ಆರಂಭಿಸುತ್ತಾರೆ. ದಶಕಗಳ ಹಳೆಯ ಶಿಥಿಲ ಕಟ್ಟಡಗಳನ್ನು ದುರಸ್ತಿಗೊಳಿಸಿ ಮತ್ತೆ ಹತ್ತಾರು ವರ್ಷಗಳ ಕಾಲ ಬಾಳಿಕೆ ಬರುವಂತೆ ಮಾಡುವುದೇ ಇವರ ಕಂಪನಿಯ ಉದ್ದೇಶ. ಮೀರಾರೋಡ್‌ ಖುಷಿ ರೆಸಿಡೆಂಟ್ಸ್‌ ನಿವಾಸಿಯಾಗಿರುವ ಗೋಪಾಲಕೃಷ್ಣ-ಸುಮನಾ ದಂಪತಿಗೆ ಇಬ್ಬರು ಮಕ್ಕಳು. ಪುತ್ರ ಮೆಹುಲ್‌ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದರೆ, ಪುತ್ರಿ ಮೇಘನಾ ವ್ಯಾಸಂಗ ಮಾಡುತ್ತಿದ್ದಾರೆ.

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಸಂಬಂಧಿತ ಸುದ್ದಿ: ಕಿಕ್‌ ಬಾಕ್ಸಿಂಗ್‌ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!