Friday, May 17, 2024
spot_img
More

    Latest Posts

    ಚಂದದ ಬದುಕಿಗೆ ʼಮಂಜುನಾಥʼರ ʼಹೃದಯದ ಮಾತುʼ

    ಬೆಂಗಳೂರು: ʼಕದ ತೆರೆದ ಆಕಾಶʼ, ʼಅಮ್ಮ ಕೊಟ್ಟ ಜಾಜಿ ದಂಡೆʼ, ʼಕಾಡ ಸೆರಗಿನ ಸೂಡಿʼ ಮುಂತಾದ ಕೃತಿಗಳನ್ನು ರಚಿಸಿರುವ ಹಿರಿಯ ಪತ್ರಕರ್ತ ಮಂಜುನಾಥ್‌ ಚಾಂದ್‌ ಇದೀಗ ʼಹೃದಯದ ಮಾತುʼಗಳನ್ನು ನಿಮ್ಮ ಮುಂದಿಟ್ಟಿದ್ದಾರೆ.

    ಅರ್ಥಾತ್‌, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.‌ ಮಂಜುನಾಥ್‌ ಅವರಿಂದ ಹೃದಯದ ಆರೋಗ್ಯ ಕುರಿತ ಮಾಹಿತಿ-ಸಲಹೆ-ಸೂಚನೆಗಳನ್ನು ‘ಹೃದಯದ ಮಾತು’ ಎಂಬ ಕೃತಿಯ ರೂಪದಲ್ಲಿ ಮಂಜುನಾಥ್‌ ಚಾಂದ್‌ ನಿಮ್ಮ ಮುಂದಿರಿಸಿದ್ದಾರೆ. ಅವರ ಈ ಕೃತಿಯನ್ನು ವೀರಕಪುತ್ರ ಶ್ರೀನಿವಾಸ್‌ ಅವರ ವೀರಲೋಕ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಇತ್ತೀಚೆಗೆ ಈ ಪುಸ್ತಕದ ಬಿಡುಗಡೆಯೂ ಆಗಿದೆ.

    ʼವೀರಲೋಕʼ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ಹತ್ತು ಕೃತಿಗಳಲ್ಲಿ ಹೃದಯದ ಮಾತು ಕೂಡ ಒಂದಾಗಿದ್ದು, ಈ ಹತ್ತೂ ಕೃತಿಗಳು ರಾಜ್ಯೋತ್ಸವ ದಿನವಾದ ನ. 1ರಂದು ಬೆಂಗಳೂರಿನ ಎನ್‌.ಆರ್.‌ ಕಾಲನಿಯ ಡಾ.ಸಿ. ಅಶ್ವಥ್‌ ಕಲಾಭವನದಲ್ಲಿ ಬಿಡುಗಡೆಯಾದವು. ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್‌ ಈ ಕಾರ್ಯಕ್ರಮ ಉದ್ಘಾಟಿಸಿದ್ದು, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‌ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದರು.

    ಡಾ.ಸಿ.ಎನ್.ಮಂಜುನಾಥ್‌, ಮಂಜುನಾಥ್‌ ಚಾಂದ್‌, ವೀರಕಪುತ್ರ ಶ್ರೀನಿವಾಸ್

    ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವಿಜಯಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಲೇಖಕ ಸಂತೋಷ್‌ಕುಮಾರ್‌ ಮೆಹಂದಳೆ, ರಂಗಕರ್ಮಿ-ನಟ ಮಂಡ್ಯ ರಮೇಶ್‌ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಬರಹಗಾತಿ ಕುಸುಮಾ ಆಯರಹಳ್ಳಿ ಪುಸ್ತಕ ಪರಿಚಯ ಮಾಡಿದ್ದರು. ವೀರಲೋಕದ ವೀರಕಪುತ್ರ ಶ್ರೀನಿವಾಸ್‌, ಬಿಡುಗಡೆಗೊಂಡ ಇತರ ಕೃತಿಗಳ ಲೇಖಕರಾದ ವಾಸುದೇವ ಶೆಟ್ಟಿ, ನರೇಂದ್ರ ರೈ ದೇರ್ಲ, ರಂಗಸ್ವಾಮಿ ಮೂಕನಹಳ್ಳಿ, ರಾಜೀವ ನಾರಾಯಣ ನಾಯಕ, ನಾಗವೇಣಿ ಎಂ. ಹೆಗಡೆ, ಶುಭಶ್ರೀ ಭಟ್ಟ, ರಾಘವ್‌, ಸದಾಶಿವ ಸೊರಟೂರು ಉಪಸ್ಥಿತರಿದ್ದರು.

    ಇಂದಿನ ಯುವಜನರ ಹೃದಯಗಳು ವರ್ಷದಿಂದ ವರ್ಷಕ್ಕೆ ದುರ್ಬಲವಾಗುತ್ತಿವೆ ಎಂಬ ಅಂಕಿ-ಅಂಶಗಳು ಚಿಂತನೆಗೆ ಈಡುಮಾಡುತ್ತಿವೆ. ಬದಲಾದ ಜೀವನ ಶೈಲಿ, ಒತ್ತಡದ ಜೀವನ, ವಿಶ್ರಾಂತಿರಹಿತ ದಿನಚರಿ, ಧೂಮಪಾನ ಮತ್ತಿತರ ಕಾರಣಗಳಿಂದಾಗಿ ಕಡಿಮೆ ವಯಸ್ಸಿನವರು ಹೆಚ್ಚಿನ ಪ್ರಮಾಣದಲ್ಲಿ ಹೃದಯ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಬೇಕಿದೆ. ಆರೋಗ್ಯವಂತರೂ ಅಂಥ ಯಾವುದೇ ಕಾರಣವಿಲ್ಲದೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಅದರಲ್ಲೂ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಕಾರಣಗಳ ಪತ್ತೆಗೆ ಅಧ್ಯಯನ ನಡೆಸಲಾಗುತ್ತಿದೆ.
    |
    ಡಾ. ಸಿ.ಎನ್.ಮಂಜುನಾಥ್, ನಿರ್ದೇಶಕ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ

    ಹೃದಯದ ಮಾತು ಸೇರಿ ಹತ್ತು ಕೃತಿಗಳ ಬಿಡುಗಡೆ ದಿನ ಮಂಜುನಾಥ್‌ ಚಾಂದ್

    ಜೀವನ ಅಂದು-ಇಂದು…

    (ಹೃದಯ ಮಾತು ಕೃತಿ ಕುರಿತು ಸಂಗೀತಾ ಚಚಡಿ ಅವರ ಅನಿಸಿಕೆ)

    ಹಿಂದಿನ ತಲೆಮಾರು ಹಾಗೂ ಹಿಂದಿನ ಕಟ್ಟಡಗಳಲ್ಲಿ ಸಾಮ್ಯತೆ ಇದೆ . ಹಿಂದೆಲ್ಲ ಕಟ್ಟಡಗಳನ್ನು ವರ್ಕಿಂಗ್ ಸ್ಟ್ರೆಸ್ ಎಂಬ ನಿಯಮದ ಪ್ರಕಾರ ವಿನ್ಯಾಸಗೊಳಿಸುತ್ತಿದ್ದೆವು . ಅಂದರೆ ಕಟ್ಟಡದಲ್ಲಿ ಬಳಸುವ ವಸ್ತು, ಬಾಗಲಾರದೇ , ಬಳುಕಲಾರದೇ , ಬಿರುಕು ಬಿಡಲಾರದೇ ಇರಲು ಎಷ್ಟು ಒತ್ತಡಕ್ಕೆ ಅನುಮತಿ ಕೊಡುವುದೋ ಅಷ್ಟು ಒತ್ತಡವನ್ನು ಮಾತ್ರ ಅದರ ಮೇಲೆ ಹಾಕುವುದು .

    ಹೀಗಾಗಿ ಒಂದು ಕಟ್ಟಡದ ಜೀವಿತಾವಧಿಯಲ್ಲಿ ಅದರಲ್ಲಿರುವ ವಸ್ತುಗಳ ಮೇಲಿನ ಒತ್ತಡ ಅವುಗಳ ಅನುಮತಿಯನ್ನು ಮೀರುತ್ತಿರಲಿಲ್ಲ ಮತ್ತು ಅವು ಕೊನೆಯವರೆಗೂ ಸೇವೆಗೆ ಉಪಯುಕ್ತವಾಗಿರುತ್ತಿದ್ದವು. ಅವುಗಳ ಅಳತೆಗಳೂ ಅದಕ್ಕನುಗುಣವಾಗಿರುತ್ತಿದ್ದವು . ದಪ್ಪ ಗೋಡೆಗಳು, ದಪ್ಪ ಕಂಬಗಳು ಹೀಗೆಲ್ಲ.. ಇದೊಂದು ಥರ ಬಿರುಕುಗಳಿಗೆ ಅನುಮತಿ ಇಲ್ಲದ ವಿನ್ಯಾಸ.

    ಬಹುಶಃ ಅಂದಿನ ಪೀಳಿಗೆಯೂ ಹಾಗೆಯೇ. ತಮ್ಮಿಂದೆಷ್ಟು ಆಗುತ್ತದೋ ಅಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತ, ಅಷ್ಟೇ ಚಿಂತಿಸುತ್ತ ಜೀವಿತದ ಕೊನೆಯವರೆಗೂ ಆರೋಗ್ಯಪೂರ್ಣವಾಗಿ ಚಟುವಟಿಕೆಯಿಂದ ಇರುತ್ತಿದ್ದರು. ಬಂಧು ಭಾಂದವರಾಗಲಿ , ವ್ಯವಸ್ಥೆಗಳಾಗಲಿ,  ಮಕ್ಕಳಾಗಲಿ ಹೆಚ್ಚಿನ ಅಪೇಕ್ಷೆ ಮಾಡುತ್ತಿರಲಿಲ್ಲ .

    ಕಾಲ ಬದಲಾದಂತೆ ಒಂದು ವಸ್ತುವಿನಿಂದ ಎಷ್ಟು ಆಗುತ್ತದೋ ಅಷ್ಟು ಕೆಲಸ ಪಡೆಯಬೇಕು , ಅದು ಎಷ್ಟು ಬಗ್ಗುತ್ತದೋ ಅಷ್ಟು ಬಗ್ಗಿಸಬೇಕು , ಅದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಶುರುವಾಗಿದ್ದು ಲಿಮಿಟ್ ಸ್ಟೇಟ್ ಡಿಸೈನ್ ಎಂಬ ನಿಯಮಗಳಿಂದ. ಇದರ ಪ್ರಕಾರ ಒಂದು ಕಟ್ಟಡದಲ್ಲಿ ಒಂದು ಮಿತಿಯಲ್ಲಿ ಬಿರುಕುಗಳು ಮೂಡಿದರೂ, ಒಂದು ಮಿತಿಯಲ್ಲಿ ಅದು ಬಾಗಿದರೂ, ಚಿಕ್ಕಪುಟ್ಟ ರಿಪೇರಿಗಳನ್ನು ಮಾಡುತ್ತ, ಸರಿಯಾಗಿ ನಿರ್ವಹಿಸುತ್ತಾ ಇದ್ದಲ್ಲಿ ಅವುಗಳನ್ನು ಉಪಯೋಗಿಸುತ್ತಲೇ ಇರಬಹುದು .

    ಅದಕ್ಕೂ ಹೆಚ್ಚಿನ ಒತ್ತಡ ಹಾಕಿದಾಗ ಮಾತ್ರ ಅದು ವಾಸ ಯೋಗ್ಯವಲ್ಲದ ಕಟ್ಟಡವಾಗುತ್ತದೆ . ಆ ಮಿತಿಯವರೆಗೂ ವಸ್ತುವಿನ ಉಪಯೋಗ ಪಡೆಯಬಹುದು, ಪೈಸಾ ವಸೂಲ್ ಎನ್ನುತ್ತಾರಲ್ಲ ಹಾಗೆ.

    ಹೀಗಾಗಿ ಹಿಂದಿನಕ್ಕಿಂತ ಕಡಿಮೆ ದಪ್ಪದ ಗೋಡೆಗಳು, ಕಂಬಗಳು ಹೆಚ್ಚು ಹೆಚ್ಚು ಮಹಡಿಗಳ ಭಾರ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸುವ ಪ್ರಕ್ರಿಯೆ ಶುರುವಾಯಿತು. ಆದರೆ ಕಟ್ಟಿಗೆಯೇ ಇರಲಿ, ಇಟ್ಟಿಗೆಯೇ ಇರಲಿ ಅದೆಷ್ಟು ಒತ್ತಡ ತಡೆದುಕೊಳ್ಳುತ್ತದೆ , ಎಷ್ಟು ಭಾರ ಹೊರುತ್ತದೆ ? ಒಂದು ಟ್ರಾನ್ಸ್‌ಫಾರ್ಮರ್‌ ಎಷ್ಟು ಒತ್ತಡ ತೆಗೆದುಕೊಳ್ಳುತ್ತದೆ? ಎಂಬುದನ್ನೆಲ್ಲ ವಿವರವಾಗಿ ಅಭ್ಯಸಿಸಿ ವಿನ್ಯಾಸಗೊಳಿಸುವ ಮನುಷ್ಯನಿಗೆ ತಾನು ಸ್ವತಃ ಎಷ್ಟು ಒತ್ತಡ ತಡೆದುಕೊಳ್ಳಬಲ್ಲೆ ಎಂಬುದನ್ನು ಕಂಡುಹಿಡಿಯಲಾಗುವುದಿಲ್ಲ ಎನ್ನುವದು ಒಂದು ವಿಪರ್ಯಾಸವೇ ಸರಿ .

    ಬಹುಶಃ ಮನುಷ್ಯನ ಮೇಲೆಯೂ ಹೀಗೆಯೇ ಒತ್ತಡಗಳು ಶುರುವಾದವು, ಅಪೇಕ್ಷೆಗಳು ಹೆಚ್ಚಾದವು. ಆದರೆ ಆತನಿಗೆ ಇದು ನಿನ್ನ ಮಿತಿ ಮೀರುತ್ತಿದೆ . ಇಲ್ಲಿಗೆ ನಿಲ್ಲಿಸು ಎಂದು ಹೇಳುವ ಇಂಜಿನಿಯರ್ ತಯಾರಾಗಲಿಲ್ಲ .

    ಆರೋಗ್ಯ ಹದೆಗೆಟ್ಟ ಮೇಲೆ , ಮಿತಿಮೀರಿದ ಮೇಲೆ ವೈದ್ಯರ ಬಳಿ ಓಡುತ್ತೇವೆಯೇ ಹೊರತು ನಮ್ಮ ನಮ್ಮ ಒತ್ತಡಗಳ ಮಿತಿಯನ್ನು ಪರೀಕ್ಷೆಗೆ ಒಳಪಡಿಸಿಕೊಳ್ಳುವುದಕ್ಕಲ್ಲ. ಹಾಗೊಂದು ವೇಳೆ ದೇಹವೆಂಬ ಕಟ್ಟಡಕ್ಕೊಬ್ಬ ಇಂಜಿನಿಯರ್ ಸಿಕ್ಕು, ದೇಹದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುತ್ತಿದ್ದರೆ ಅದನ್ನು ಕೂಡ ಸಣ್ಣ ಪುಟ್ಟ ರಿಪೇರಿ ಮಾಡುತ್ತ ಕೊನೆಯವರೆಗೂ ವಾಸಯೋಗ್ಯವಾಗಿಸಬಹುದು .

    ಅಂತಹದೊಂದು ಪ್ರಯತ್ನ ಇಲ್ಲೊಬ್ಬ ಪತ್ರಕರ್ತ ಮತ್ತು ವೈದ್ಯರೊಬ್ಬರ ಕುಶಲೋಪರಿ ಮಾತುಕತೆಯ ಮೂಲಕ ನಡೆದಿದೆ . ದೇಹದ ಇಂಜಿನ್ ಆದ ಹೃದಯವನ್ನು ಹೇಗೆ ಆರೋಗ್ಯಯುಕ್ತವಾಗಿ ಇರಿಸಿಕೊಳ್ಳಬಹುದು ಎಂಬ ಮಹತ್ವದ ಕಲಿಕೆ ಇದೆ .  ದೇಹಕ್ಕೊಬ್ಬ ಡಾಕ್ಟರ್  ಕಮ್  ಇಂಜಿನಿಯರ್ ಸಿಕ್ಕಿಬಿಟ್ಟಿದ್ದಾರೆ. ಒಂದೆರಡು ಪುಟಗಳನ್ನು ಓದಿದ್ದಷ್ಟೇ,

    ಪುಸ್ತಕ ಕೊಂಡ ದಿನವೇ ಹಿತೈಶಿಯೊಬ್ಬರಿಗೆ ಉಡುಗೊರೆ ಕೊಟ್ಟಾಯಿತು, ಮತ್ತಿನ್ನೊಂದು ಕೊಳ್ಳಬೇಕು .

    ಅದಕ್ಕೇ ತಾವು ಕೊಳ್ಳುವಾಗಲೇ ಒಂದೆರಡು ಪುಸ್ತಕ ಹೆಚ್ಚಿಗೇ ಕೊಂಡುಬಿಡಿ. ಇಲ್ಲದಿದ್ದರೆ ದೇಹವೆಂಬ ಕಟ್ಟಡದ ನಿರ್ವಹಣೆಯಲ್ಲಿ ಗ್ಯಾಪ್ ಮೂಡಿಬಿಡುತ್ತದೆ. ಹೃದಯದ ಮಾತು ಹೃದಯದಲ್ಲೇ ಉಳಿದುಬಿಡುತ್ತವೆ. ಮಂಜುನಾಥ್‌ ಚಾಂದ್ ಅವರ ಈ ಅದ್ಭುತ ಪರಿಕಲ್ಪನೆಗೆ ಒಂದು ಸಲಾಂ  ಸಲ್ಲಲೇ ಬೇಕು 🙏

    – ಸಂಗೀತಾ ಚಚಡಿ

    ಚಾಂದ್‌ ಕುರಿತ ಇತರ ಸುದ್ದಿ: ‘ಸೂಡಿ’ ಬೆಳಕಲ್ಲಿ.. ‘ಕುಂದಾಪುರಕ್ಕೆ ಬಂದಿದ್ದ ಗಾಂಧಿ..’!

    ಚಾಂದ್‌ ಕುರಿತ ಇತರ ಸುದ್ದಿ: ಪತ್ರಕರ್ತ ಮಂಜುನಾಥ್ ಚಾಂದ್ ಅವರಿಗೆ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’ ಪ್ರದಾನ

    ಚಾಂದ್‌ ಕುರಿತ ಇತರ ಸುದ್ದಿ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಡ ಸೆರಗಿನ ಸೂಡಿಯ ಭುಗಿಲು

    ಸಮಾಜಬಾಂಧವರು ಮಂಜುನಾಥ್‌ ಚಾಂದ್ ಅವರ ʼಹೃದಯದ ಮಾತುʼ ಕೃತಿಯನ್ನು ಖರೀದಿಸಿ ಓದಿ ತಮ್ಮ ಹೃದಯದ ಆರೋಗ್ಯದ ಕುರಿತು ಅರಿಯಬೇಕು ಮಾತ್ರವಲ್ಲ‌, ಚಾಂದ್ ಅವರು ಇನ್ನಷ್ಟು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಹುರಿದುಂಬಿಸಬೇಕು. ಆಸಕ್ತರು ಪುಸ್ತಕವನ್ನು ಖರೀದಿಸಲು https://veeralokabooks.com/ ಅಥವಾ https://bookmaadi.com/ ತಾಣಕ್ಕೆ ಭೇಟಿ ನೀಡಬಹುದು. ಇಲ್ಲವೇ 70221 22121 ಅಥವಾ 080-6926 2222 ಸಂಪರ್ಕಿಸಬಹುದು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಯಾರಿವರು.. ಎಲ್ಲಿದ್ದರು ಇಷ್ಟು ದಿನ?; ಇದು ‘ಕ್ಷಯ’ ಹುಟ್ಟುಹಾಕಿದ ಪ್ರಶ್ನೆ!

    ಸಂಬಂಧಿತ ಸುದ್ದಿ: ಜನವರಿಯಲ್ಲಿ ನಡೆಯಲಿದೆ ಬೃಹತ್‌ ಗಾಣಿಗ ಸಮಾವೇಶ; ಬೇಡಿಕೆಗಳ ಕುರಿತು ನಡೆಯಿತು ಪೂರ್ವಭಾವಿ ಸಭೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!