Saturday, September 21, 2024
spot_img
More

    Latest Posts

    ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಗಾಣಿಗರೇ ನಿರ್ಣಾಯಕ; ರಮೇಶ ಭೂಸನೂರ ಗೆಲ್ಲುವ ಸಾಧ್ಯತೆ ಅತ್ಯಧಿಕ

    ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್‌ 30ರಂದು ಸಿಂದಗಿ ಹಾಗೂ ಹಾನಗಲ್‌ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಈ ಪೈಕಿ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಗಾಣಿಗ ಸಮುದಾಯವೇ ನಿರ್ಣಾಯಕ ಎಂಬ ಅಂಶಗಳು ಗೋಚರಿಸಿವೆ. ಮಾತ್ರವಲ್ಲ, ಗಾಣಿಗ ಸಮುದಾಯದವರೇ ಆಗಿರುವ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲ್ಲುವ ಸಾಧ್ಯತೆ ಕೂಡ ಅತ್ಯಧಿಕ ಎಂದೂ ಹೇಳಲಾಗುತ್ತಿದೆ.

    ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರಸ್ತುತ 2,34,309 ಮತದಾರರಿದ್ದು, ಆ ಪೈಕಿ 1,20,949 ಪುರುಷರು, 1,13,327 ಮಹಿಳೆಯರು ಮತ್ತು 33 ಮಂದಿ ಇತರರು. ಇನ್ನು ಸಮುದಾಯವಾರು ಲೆಕ್ಕ ಹಾಕುವುದಾದರೆ ಸಾಮಾನ್ಯವರ್ಗದಲ್ಲಿ ಗಾಣಿಗ ಸಮುದಾಯದ ಮತದಾರರೇ ಹೆಚ್ಚಿದ್ದಾರೆ. ಮಾತ್ರವಲ್ಲ ಒಟ್ಟಾರೆಯಾಗಿ ಪರಿಗಣಿಸಿದರೂ ಈ ಕ್ಷೇತ್ರದಲ್ಲಿ ಗಾಣಿಗ ಸಮಾಜದ ಮತದಾರರೇ ಅಧಿಕ ಪ್ರಮಾಣದಲ್ಲಿದ್ದಾರೆ. ಹೀಗಾಗಿ ಈ ಸಮುದಾಯ ಸಂಪೂರ್ಣವಾಗಿ ಒಂದು ಕಡೆಗೆ ಮತ ಚಲಾಯಿಸಿದರೆ ಅದೇ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಸಿಂದಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ

    ಗಾಣಿಗ ಮತದಾರರೇ ಅಧಿಕ: ಸಾಮಾನ್ಯ ವರ್ಗದಲ್ಲಿ ರೆಡ್ಡಿ-13,654; ಲಿಂಗಾಯತ-21,500; ಬಣಜಿಗ-10,100; ಇತರ-48,837 ಮತದಾರರಿದ್ದು, ಒಟ್ಟು 1,24,143 ಮಂದಿ ಸಾಮಾನ್ಯ ವರ್ಗದ ಮತದಾರರಿದ್ದಾರೆ. ಆದರೆ ಇದರಲ್ಲಿ ಗಾಣಿಗ ಸಮುದಾಯದವರೇ ಅತ್ಯಧಿಕ  ಅಂದರೆ 30,052 ಮಂದಿ ಮತದಾರರಿದ್ದಾರೆ. 

    ಇನ್ನು ಹಿಂದುಳಿದ ವರ್ಗದಲ್ಲಿ ಕುರುಬ-19,449; ತಳವಾರ-21,277; ಸವಿತಾ ಸಮಾಜ-5,645; ಕುಂಬಾರ-5,560 ಮತ್ತು ಇತರರು 9853 ಸೇರಿ ಒಟ್ಟು 60,784 ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದಲ್ಲಿ ಹರಿಜನ-13,562; ಲಂಬಾಣಿ-7,625; ಪರಿಶಿಷ್ಟ ಪಂಗಡ-2250 ಮತ್ತು ಇತರ 4,200 ಮತದಾರರು ಸೇರಿ ಒಟ್ಟು 27,637 ಮತಗಳಿವೆ. ಮತ್ತೊಂದೆಡೆ ಮುಸ್ಲಿಮರು 20,465 ಇದ್ದರೆ, ಜೈನ ಮತದಾರರು 280 ಮಂದಿ ಇದ್ದಾರೆ.

    ಸ್ಪರ್ಧಿಗಳು: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಭೂಸನೂರ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಶೋಕ ಮನಗೂಳಿ, ಜೆಡಿಎಸ್‌ ಅಭ್ಯರ್ಥಿಯಾಗಿ ನಾಜಿಯಾ ಶಕೀಲ್‌ ಹಾಗೂ ಕರ್ನಾಟಕ ರಾಷ್ಟ್ರನಿರ್ಮಾಣ ಪಕ್ಷದಿಂದ ಡಾ.ಸುನೀಲ್‌ಕುಮಾರ್‌ ಹೆಬ್ಬಿ ಸೇರಿ ಒಟ್ಟು 8 ಸ್ಪರ್ಧಿಗಳು ಕಣದಲ್ಲಿದ್ದಾರೆ.

    ಬಹುಮತ ಸಾಧ್ಯತೆ

    ರಮೇಶ ಭೂಸನೂರ ಅವರು ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಆಗಿರುವುದು ಹಾಗೂ ಅವರು ಅತ್ಯಧಿಕ ಮತದಾರರು ಇರುವ ಗಾಣಿಗ ಸಮುದಾಯದವರಾಗಿರುವುದು ಮಾತ್ರವಲ್ಲದೆ ಗಾಣಿಗ ಸಮುದಾಯದವರೇ ಆಗಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಈ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿ ಹೊತ್ತಿರುವುದು ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿರಲಿದೆ. ಅಲ್ಲದೆ ಅವರು ಈ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ ಕ್ಷೇತ್ರ ಇದಾಗಿರುವುದರಿಂದ ಒಂದಷ್ಟು ಹಿಡಿತವೂ ಇರುವುದರಿಂದ ಮತ್ತು ಆ ಅವಧಿಗಳಲ್ಲಿನ ಕೆಲಸಗಳೂ ಪ್ರಭಾವ ಬೀರುವುದರಿಂದ ರಮೇಶ ಭೂಸನೂರ ಅವರು ಗೆಲ್ಲುವ ಸಾಧ್ಯತೆ ಅತ್ಯಧಿಕ ಎಂಬುದಕ್ಕೆ ಅನೇಕ ಅಂಶಗಳು ಗೋಚರಿಸುತ್ತಿವೆ. ಇನ್ನೊಂದೆಡೆ ಇಲ್ಲಿ ಕಣದಲ್ಲಿರುವ ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿ ಡಾ.ಸುನೀಲ್‌ ಕುಮಾರ್‌ ಹೆಬ್ಬಿ ಕೂಡ ಗಾಣಿಗ ಸಮುದಾಯದವರೇ.

    ಸಂಬಂಧಿತ ಸುದ್ದಿ: ಸಿಂದಗಿಯಿಂದ ಶುರು.. ಡಾ.ಹೆಬ್ಬಿ ರಾಜಕೀಯ ಜಿಂದಗಿ; ಮೊಬೈಲ್‌ ಡಾಕ್ಟರ್‌ ಈಗ ಎಮ್‌ಎಲ್‌ಎ ಅಭ್ಯರ್ಥಿ..

    ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!