Friday, May 17, 2024
spot_img
More

    Latest Posts

    ಶಾಸಕರ ಆರೋಪಕ್ಕೆ ಪೊಲೀಸ್ ಕಮಿಷನರ್ ಖಡಕ್ ಎದಿರೇಟು

    ಬೆಂಗಳೂರು: ಎನ್‌ಕೌಂಟರ್ ಖ್ಯಾತಿಯ ಖಡಕ್ ಪೊಲೀಸ್ ಆಫೀಸರ್, ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಈಗ ಮತ್ತೊಮ್ಮೆ ಖಾಕಿ ಖದರ್ ತೋರಿದ್ದು, ಶಾಸಕರೊಬ್ಬರ ಆರೋಪಕ್ಕೆ ಕಟುವಾಗಿಯೇ ಎದಿರೇಟು ನೀಡಿದ್ದಾರೆ. ಅತಿರೇಕದ ಹೇಳಿಕೆ ನೀಡಿರುವ ಬಿಜೆಪಿ ಶಾಸಕರೊಬ್ಬರ ವಿರುದ್ಧ ಕಾನೂನುಕ್ರಮ ಜರುಗಿಸುವುದಾಗಿಯೂ ಗುಡುಗಿದ್ದಾರೆ.

    ಹೈದರಾಬಾದ್‌ನ ಘೋಷಾಮಹಲ್ ಕ್ಷೇತ್ರದ ಶಾಸಕ ರಾಜಾ ಸಿಂಗ್ ನೀಡಿದ್ದ ಹೇಳಿಕೆಯೇ ಇಷ್ಟಕ್ಕೆಲ್ಲ ಕಾರಣ. ಕೈಯಲ್ಲಿ ಸಾಂವಿಧಾನಿಕ ಅಧಿಕಾರ ಇದ್ದಾಗ್ಯೂ ಅವರು ಆ ರೀತಿ ಮಾತನಾಡಿರುವುದು ಸರಿಯಲ್ಲ. ಅವರೊಬ್ಬ ಜವಾಬ್ದಾರಿಯುತ ವ್ಯಕ್ತಿ. ಅಂಥ ಆಧಾರರಹಿತ ಆರೋಪಗಳನ್ನು ಮಾಡುವ ಮೊದಲು ವಿವೇಚಿಸಿ ಮಾತಾಡಬೇಕು ಎಂಬುದಾಗಿ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಕಿವಿಮಾತು ಹೇಳಿದ್ದಾರೆ.

    ಅತ್ಯಾಧುನಿಕ ಕಂಟೇನರ್ ಮೂಲಕ ಕಳ್ಳಸಾಗಣೆ ಆಗುತ್ತಿದ್ದ ಗೋವುಗಳನ್ನು ಡಿ.22ರಂದು ಷಂಷಾಬಾದ್ ಬಳಿ ತಮ್ಮ ತಂಡದ ಮೂಲಕ ತಡೆದು ಆ ಗೋವುಗಳನ್ನು ಶಾಸಕರು ರಕ್ಷಿಸಿದ್ದರು. ಇಂಥ ಕಳ್ಳಸಾಗಣೆಯನ್ನು ತಡೆಯುವ ಬದಲು ಪೊಲೀಸರು ನಮ್ಮ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಿ ಶೋಷಣೆ ನಡೆಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ನಮ್ಮ ಕಾರ್ಯಕರ್ತರು ಇದನ್ನು ಮಾಡಲು ಸಾಧ್ಯವಿರುವಾಗ ಪೊಲೀಸರು ಯಾಕೆ ಕಳ್ಳಸಾಗಣೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದೂ ರಾಜಾ ಸಿಂಗ್ ಪ್ರಶ್ನೆ ಮಾಡಿದ್ದರು.

    ಈ ಕಳ್ಳಸಾಗಣೆಗೆ ಸೈಬರಾಬಾದ್‌ನ ಕೊತ್ತೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಾಹನ ಪೂರೈಸುತ್ತಿದ್ದಾರೆ. ಪೊಲೀಸರು ಯಾಕೆ ಇಂಥವರ ಜೊತೆ ಕೈಜೋಡಿಸಿ ಹಣ ತೆಗೆದುಕೊಳ್ಳುತ್ತಿದ್ದಾರೆ? ಅವರಿಗೆ ಸಂಬಳ ಸಾಲದಿದ್ದರೆ ನಾವು ಬೇಡಿಯಾದರೂ ಅವರಿಗೆ ಕೊಡುತ್ತೇವೆ. ಆದರೆ ಅವರು ಇಂಥ ಗೋವು ಕಳ್ಳಸಾಗಣಿಕೆದಾರರಿಗೆ ಬೆಂಬಲ ನೀಡಬಾರದು ಎಂದು ಶಾಸಕರು ಅಂದು ಕಿಡಿಕಾರಿದ್ದರು.

    ಶಾಸಕರ ಈ ಆರೋಪಗಳನ್ನು ನಿರಾಕರಿಸಿರುವ ಪೊಲೀಸ್ ಕಮಿಷನರ್, ಅಂಥ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೆ ಶಾಸಕರು ಹತ್ತಿರದ ಪೊಲೀಸ್ ಠಾಣೆ, ಡಿಜಿಪಿ-ಕಮಿಷನರ್ ಯಾರಿಗೆ ಬೇಕಿದ್ದರೂ ಮಾಹಿತಿ ನೀಡಬಹುದು. ಆಗ ನಾವು ಅಂಥವರ ವಿರುದ್ಧ ಖಂಡಿತ ಕಾನೂನುಕ್ರಮ ಜರುಗಿಸುತ್ತೇವೆ. ಆಧಾರರಹಿತವಾಗಿ ಆರೋಪ ಮಾಡುವ ಬದಲು ಅಂಥ ಅಪರಾಧಗಳ ಬಗ್ಗೆ ಸೂಕ್ತರೀತಿಯಲ್ಲಿ ಗಮನ ಸೆಳೆಯುವುದು ಸರಿಯಾದ ಕ್ರಮ ಎಂದು ಪ್ರತಿಕ್ರಿಯಿಸಿದ್ದಾರೆ.

    ಇತ್ತೀಚೆಗೆ ಪೊಲೀಸ್ ಇಲಾಖೆ, ಪೊಲೀಸ್ ಅಧಿಕಾರಿಗಳ ವಿರುದ್ಧ ಮಾತನಾಡುವುದೂ ಒಂದು ಫ್ಯಾಷನ್ ಆಗಿದೆ. ಸುಖಾಸುಮ್ಮನೆ ಹಾಗೆ ಮಾತನಾಡುವವರ ವಿರುದ್ಧ ಕಾನೂನುಕ್ರಮ ಜರುಗಿಸುತ್ತೇವೆ.

    | ವಿ.ಸಿ. ಸಜ್ಜನರ್ ಪೊಲೀಸ್ ಕಮಿಷನರ್, ಸೈಬರಾಬಾದ್

    ಸೈಬರಾಬಾದ್ ಪೊಲೀಸ್ ಕಮಿಷನರ್ ಸಜ್ಜನರ್‌ಗೆ ಸಚಿವರಿಂದ ಸನ್ಮಾನ 

    ಮೆಚ್ಚುಗೆ ಗಳಿಸಿದೆ ತೆಲಂಗಾಣದಲ್ಲಿರುವ ಈ ‘ಸಜ್ಜನರ’ ಸಜ್ಜನಿಕೆ…


    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!