Friday, May 17, 2024
spot_img
More

    Latest Posts

    ಆರ್ಥಿಕ ವಂಚನೆಗೀಡಾಗಿದ್ದೀರಾ? ಆ್ಯಪ್‌ ಮೂಲಕ ಸಾಲ ತಗೋತೀರಾ? ಹಾಗಿದ್ರೆ ಪೊಲೀಸ್ ಕಮಿಷನರ್ ಸಲಹೆ ಪಡೆಯಬಹುದು..

    ಬೆಂಗಳೂರು: ಆನ್‌ಲೈನ್‌ನಲ್ಲಿ ಆರ್ಥಿಕ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ಈಗೀಗ ಬಹಳಷ್ಟು ಹೆಚ್ಚಾಗುತ್ತಿದೆ. ಕೆಲವರು ಅಧಿಕ ಲಾಭದ ಆಮಿಷಕ್ಕೆ, ಇನ್ನು ಕೆಲವರು ಆ ಕಡೆಯಿಂದ ಹಣ ಕೇಳುವ ಅಪರಿಚಿತರ ಭರವಸೆಗೆ, ಮತ್ತೆ ಕೆಲವರು ತಮಗೆ ಗೊತ್ತಾಗದಂತೆ ಅಥವಾ ಅರಿವಿನ ಕೊರತೆಯಿಂದ ಕೈಯಾರೆ ಮೋಸ ಹೋದ ಪ್ರಕರಣಗಳು ಕೂಡ ವರದಿಯಾಗಿವೆ. ಆ ಪೈಕಿ ಹಲವರು ತಾವು ಮೋಸ ಹೋದ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಾಗದೆ, ಕೆಲವೊಮ್ಮೆ ಮುಂದೇನು ಮಾಡಬೇಕು ಎಂದು ತೋಚದೆ ಸುಮ್ಮನಾಗಿ ಬಿಡುತ್ತಿದ್ದಾರೆ. ಇದು ಅಂಥ ಆರ್ಥಿಕ ವಂಚನೆ ಎಸಗುತ್ತಿರುವವರಿಗೆ ಅನುಕೂಲವಾಗಿಯೇ ಪರಿಣಮಿಸುತ್ತಿದೆ. ತಮಗಾದ ವಂಚನೆ ಬಗ್ಗೆ ಅನ್ಯಾಯಕ್ಕೆ ಒಳಗಾದವರು ಸರಿಯಾದ ಸಲಹೆ ಪಡೆದು, ನಂತರ ಮುಂದಿನ ಹೆಜ್ಜೆ ಇಟ್ಟರೆ ಅವರಿಗೆ ನ್ಯಾಯ ಸಿಗುವುದಷ್ಟೇ ಅಲ್ಲದೆ ಅಂಥ ವಂಚಕರ ಜಾಡು ಹಿಡಿದು, ಅವರನ್ನು ಪತ್ತೆ ಹಚ್ಚಿ ಮುಂದೆ ಸಂಭವಿಸಬಹುದಾದ ಆರ್ಥಿಕ ವಂಚನೆಗಳನ್ನು ತಡೆಯಬಹುದು. ಆದರೆ ಹೀಗೆ ಆರ್ಥಿಕ ವಂಚನೆಗೆ ಈಡಾದವರಿಗೆ ಎದುರಾಗುವ ಮೊದಲ ಪ್ರಶ್ನೆಯೇ ಮುಂದೇನು ಮಾಡಬೇಕು? ಯಾರಲ್ಲಿ ಸಲಹೆ ಕೇಳಬೇಕು? ಎಂಬುದಾಗಿರುತ್ತದೆ. ಮೋಸ ಹೋದವರಿಗೆ ಮತ್ತೆ ಇನ್ನೊಬ್ಬರನ್ನು ನಂಬುವುದು ಕಷ್ಟ ಎನಿಸುತ್ತದೆ, ಸಲಹೆ ಕೇಳೋಣ ಎಂದರೆ ಸರಿಯಾದ ಸಲಹೆ ಕೊಡಬಲ್ಲ ಅಂಥ ಸಜ್ಜನರು ಎಲ್ಲಿ ಸಿಗುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಆ ಪ್ರಶ್ನೆಗಳಿಗೆಲ್ಲ ಉತ್ತರವೆಂಬಂತೆ, ಜೊತೆಗೆ ಸಂಬಂಧಿತ ವಿಷಯದ ಬಗ್ಗೆ ಇನ್ನೇನಾದರೂ ಪ್ರಶ್ನೆಗಳಿಗೆ ಸೂಕ್ತ ಸಲಹೆ ಕೊಡಬಲ್ಲ, ಅಗತ್ಯಬಿದ್ದರೆ ಸೂಕ್ತ ಕ್ರಮವನ್ನೂ ಜರುಗಿಸಬಲ್ಲ ಸಜ್ಜನರೊಬ್ಬರು ಇಲ್ಲಿದ್ದಾರೆ. ಅವರೇ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್.

    ವಿ.ಸಿ. ಸಜ್ಜನರ್, ಪೊಲೀಸ್ ಕಮಿಷನರ್, ಸೈಬರಾಬಾದ್.

    ಸೈಬರ್ ಕ್ರೈಮ್ ಸಂಬಂಧಿತ ದೊಡ್ಡ ದೊಡ್ಡ ಪ್ರಕರಣಗಳನ್ನು ಭೇದಿಸಿರುವ ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್, ಇದೀಗ ಆ ನಿಟ್ಟಿನಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಜೊತೆಗೆ ಆರ್ಥಿಕ ವಂಚನೆಗೆ ಒಳಗಾಗಿ ಕಂಗಾಲಾಗಿರುವವರಿಗೆ ಸೂಕ್ತ ಸಲಹೆ ಕೊಡಲೂ ಮುಂದಾಗಿದ್ದಾರೆ. ಸಾರ್ವಜನಿಕರು ತಮಗಾಗಿರುವ ಆರ್ಥಿಕ ವಂಚನೆ ಕುರಿತು ಅವರಲ್ಲಿ ಹೇಳಿಕೊಂಡರೆ ಅವರು ಮುಂದೇನು ಮಾಡಬಹುದು ಇತ್ಯಾದಿ ಸಲಹೆ ನೀಡಲಿರುವರು.

    ಇನ್ನು ಸೈಬರ್ ಕ್ರೈಮ್ ವಿಭಾಗದ ಮಾಹಿತಿ ಪ್ರಕಾರ ಜನರನ್ನು ಆನ್‌ಲೈನ್‌ನಲ್ಲಿ ಆರ್ಥಿಕ ವಂಚನೆಗೆ ಒಳಗಾಗುವಂತೆ ಮಾಡುವಲ್ಲಿ ಸಾಲ ನೀಡುವ ಆ್ಯಪ್‌ಗಳು ಕೂಡ ದೊಡ್ಡ ಪ್ರಮಾಣದಲ್ಲಿ ದಾಳವಾಗಿ ಬಳಕೆ ಆಗುತ್ತಿವೆ. ವಂಚಕರು ಸಾಲ ನೀಡುವ ಅನಧಿಕೃತ ಆ್ಯಪ್‌ಗಳನ್ನು ರೂಪಿಸಿಕೊಂಡು ಆ ಮೂಲಕ ಸಾಲ ನೀಡುವ ಸೋಗಿನಲ್ಲಿ ಮೋಸ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಅಂಥ ಸಾಕಷ್ಟು ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದ್ದರೂ ಇನ್ನೂ ಕೆಲವು ವಂಚಕರು ಅಂಥ ಆ್ಯಪ್‌ಗಳ ಮೂಲಕ ತಮ್ಮ ಕೈಚಳಕ ತೋರುತ್ತಲೇ ಇದ್ದಾರೆ. ಹೀಗಾಗಿ ಆ್ಯಪ್ ಮೂಲಕ ಸಾಲ ಪಡೆಯುವುದಾದರೆ ಯಾವ ಮಾರ್ಗ ಅನುಸರಿಸಬೇಕು, ಏನೇನು ಎಚ್ಚರ ವಹಿಸಬೇಕು ಎಂಬುದರ ಬಗ್ಗೆಯೂ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಸಲಹೆ ನೀಡಲಿದ್ದಾರೆ.

    ಅಂದಹಾಗೆ ಸಾರ್ವಜನಿಕರು ಮತ್ತು ಪೊಲೀಸ್ ಕಮಿಷನರ್ ಅವರ ಮಧ್ಯೆ ಇಂಥದ್ದೊಂದು ಸಂವಹನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ‘ಟೈಮ್ಸ್ ಆಫ್ ಇಂಡಿಯಾ’ ಮಾಧ್ಯಮ ಸಂಸ್ಥೆ ವೇದಿಕೆಯನ್ನು ಕಲ್ಪಿಸಿದೆ. ಆಸಕ್ತರು ಅಥವಾ ಅಗತ್ಯ ಇರುವ ಸಾರ್ವಜನಿಕರು ‘ಟೈಮ್ಸ್ ಆಫ್ ಇಂಡಿಯಾ’ಗೆ ತಮ್ಮ ಪ್ರಶ್ನೆಗಳನ್ನು ಕಳುಹಿಸಿದರೆ ಅವರು ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರಿಂದಲೇ ಸಲಹೆ ಪಡೆದು ಅದನ್ನು ಸಾರ್ವಜನಿಕರಿಗೆ ತಲುಪಿಸಲಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಸಲಹೆ ಸೂಚನೆ ಪಡೆಯಲು ಬಯಸುವವರಿಗೆ ಫೆಬ್ರವರಿ 26ರ ವರೆಗೆ ಅವಕಾಶವಿದೆ. ಅಂದರೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಫೆ. 26ರ ಒಳಗೆ ಕಳುಹಿಸಿಕೊಡಬೇಕು.

    ಅಹವಾಲು ಸಲ್ಲಿಸಬೇಕಾದ ವಿಳಾಸ: [email protected]

     ಸಂಬಂಧಿತ ಸುದ್ದಿ: ಮೆಚ್ಚುಗೆ ಗಳಿಸಿದೆ ತೆಲಂಗಾಣದಲ್ಲಿರುವ ಈ ‘ಸಜ್ಜನರ’ ಸಜ್ಜನಿಕೆ… 

     ಸಂಬಂಧಿತ ಸುದ್ದಿ: ಶಾಸಕರ ಆರೋಪಕ್ಕೆ ಪೊಲೀಸ್ ಕಮಿಷನರ್ ಖಡಕ್ ಎದಿರೇಟು 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!