Friday, May 17, 2024
spot_img
More

    Latest Posts

    ಕರಾಟೆಯಲ್ಲಿ ಸುಂಟರಗಾಳಿ ಎಬ್ಬಿಸಿದ ಶಶಾಂಕ್​; ಟೊರ್ನಡೊ ಕಿಕ್​ನಲ್ಲಿ ನೊಬೆಲ್ ವರ್ಲ್ಡ್​ ರೆಕಾರ್ಡ್

    ಬೆಂಗಳೂರು: ಮಂಡ್ಯದ ಈ ಯುವಕ ಈಗ ಕರಾಟೆ ಕ್ಷೇತ್ರದಲ್ಲಿ ನಿಜಕ್ಕೂ ಸುಂಟರಗಾಳಿ ಎಬ್ಬಿಸಿದ್ದಾರೆ. ಕರಾಟೆಯಲ್ಲಿನ ಅತಿ ವಿಶಿಷ್ಟ ಟೊರ್ನಡೊ ಕಿಕ್​ (ಸುಂಟರಗಾಳಿ ಹೊಡೆತ)​ ಮೂಲಕ ನೊಬೆಲ್ ವರ್ಲ್ಡ್​ ರೆಕಾರ್ಡ್ಸ್​ ಪಟ್ಟಿಯಲ್ಲಿ ದಾಖಲೆ ಬರೆದಿದ್ದಾರೆ. ಇಂಥದ್ದೊಂದೆರಡು ಕಿಕ್​ ಹೊಡೆಯುವುದೇ ಪ್ರಯಾಸದ ವಿಷಯವಾಗಿರುವಾಗ ಇವರು ನಿಮಿಷಕ್ಕೆ 62 ಟೊರ್ನಡೊ ಕಿಕ್​ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಇವರ ಸಾಧನೆಯ ವೀಡಿಯೊವನ್ನು ತರಿಸಿಕೊಂಡಿರುವ ನೊಬೆಲ್​ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ, ಅದನ್ನು ಕೂಲಂಕಷವಾಗಿ ಪರಿಶೀಲಿಸಿ ದಾಖಲೆಯನ್ನು ಸಾಬೀತುಪಡಿಸಿದೆ.

    ‘ಕೊರೊನಾ ಕಾರಣದಿಂದಾಗಿ ನೊಬೆಲ್​ ವರ್ಲ್ಡ್​ ರೆಕಾರ್ಡ್ಸ್​ನವರು ಇಲ್ಲಿಗೆ ಬರುವುದಾಗಲಿ ಅಥವಾ ನಾನೇ ಅಲ್ಲಿಗೆ ಹೋಗುವುದಾಗಲಿ ಸಾಧ್ಯವಿರದ್ದರಿಂದ ಟೊರ್ನಡೊ ಕಿಕ್​ ಪರ್ಫಾರ್ಮ್ ಮಾಡುತ್ತಿರುವ ವೀಡಿಯೊ ಮಾಡಿ ಕಳುಹಿಸಲಾಗಿತ್ತು. 2021ರ ಏಪ್ರಿಲ್​ 10ರಂದು ನಾನು ಈ ಸಾಧನೆ ಮಾಡಿದ್ದು, ದಾಖಲೆ ಸಾಧಿಸುವಲ್ಲಿ ಯಶಸ್ವಿ ಆಗಿರುವ ಕುರಿತು ಎರಡು ವಾರಗಳ ಹಿಂದಷ್ಟೇ ನನಗೆ ಪ್ರಮಾಣಪತ್ರ ತಲುಪಿದೆ’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ಆರ್. ಶಶಾಂಕ್​. ಇವರು ಡಾ.ಎಸ್​. ಕೃಷ್ಣಮೂರ್ತಿ ಅವರ ಶಿಷ್ಯ.

    ಆರ್. ಶಶಾಂಕ್

    ಏನಿದು ಟೊರ್ನಡೊ ಕಿಕ್?​: ಕರಾಟೆಯಲ್ಲಿ ಇದೊಂದು ವಿಶಿಷ್ಟ ಹಾಗೂ ವಿಶೇಷ ಶ್ರಮದ ಕಿಕ್​. ‘ಸುಂಟರಗಾಳಿ ಥರ ತಿರುತಿರುಗುತ್ತ ಕಿಕ್ ಮಾಡುವುದರಿಂದ ಇದನ್ನು ಟೊರ್ನಡೊ ಕಿಕ್ ಎನ್ನುತ್ತಾರೆ. ಈ ಕಿಕ್ ಮಾಡುತ್ತಿದ್ದರೆ ತಲೆಸುತ್ತು, ವಾಂತಿ ಬಂದ ಹಾಗೆ ಆಗುತ್ತಿರುತ್ತದೆ. ಕೆಲವೊಮ್ಮೆ ಬೆನ್ನುಮೂಳೆಗೆ ಪೆಟ್ಟಾಗುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ ಇಂಥದ್ದೊಂದು ಕಿಕ್​ನಲ್ಲಿ ದಾಖಲೆ ಮಾಡುವ ಮೊದಲು ಅಭ್ಯಾಸಕ್ಕೆಂದು ಒಂದು ಗುರಿ ಕೊಡುತ್ತಾರೆ. ಇಂಥ ಹದಿನೈದು ಇಪ್ಪತ್ತು ಕಿಕ್ ಮಾಡುವುದೇ ದೊಡ್ಡ ವಿಷಯ. ನನ್ನ ಗುರುಗಳು ನನಗೆ 40 ಟಾರ್ಗೆಟ್​ ಕೊಟ್ಟಿದ್ದರು. ಆದರೆ ಸತತ 8 ತಿಂಗಳ ಪರಿಶ್ರಮದಿಂದ ನಿಮಿಷಕ್ಕೆ 62 ಕಿಕ್​ ಮಾಡುವಲ್ಲಿ ಯಶಸ್ವಿಯಾದೆ’ ಎಂಬ ಹೆಮ್ಮೆ ಶಶಾಂಕ್ ಅವರದ್ದು. ಶಶಾಂಕ್​ ಒಂದು ಸೆಕೆಂಡ್​ಗಿಂತಲೂ ಕಡಿಮೆ ಅವಧಿಯಲ್ಲಿ ಒಂದು ಕಿಕ್ ಮಾಡಿದಂತಾಗಿರುವುದು ನಿಜಕ್ಕೂ ಶ್ಲಾಘನೀಯ.

    ಗುರು ಡಾ.ಎಸ್. ಕೃಷ್ಣಮೂರ್ತಿ ಜೊತೆ ಶಶಾಂಕ್

    11 ವರ್ಷಗಳ ಪರಿಶ್ರಮ: ಶಶಾಂಕ್​ಗೆ ಬಾಲ್ಯದಿಂದಲೂ ಕರಾಟೆ ಬಗ್ಗೆ ವಿಶೇಷ ಆಸಕ್ತಿ ಇತ್ತು. ‘ಮೂರನೇ ತರಗತಿಯಲ್ಲಿ ಇದ್ದಾಗಿನಿಂದಲೇ ಕರಾಟೆ ಕಲಿಯಲು ಆರಂಭಿಸಿದ್ದೆ. ಒಟ್ಟು 11 ವರ್ಷಗಳಿಂದ ಕರಾಟೆ ಅಭ್ಯಾಸ ಮಾಡುತ್ತಿರುವ ನಾನು ಇನ್ನೂ ಅದರ ವಿದ್ಯಾರ್ಥಿಯೇ. ಕರಾಟೆಯಲ್ಲಿ ಕಲಿಯುವುದು ಇನ್ನೂ ಬಹಳಷ್ಟಿದೆ’ ಎನ್ನುವ ಇವರು ತಮ್ಮ ಕಲಿಕೆ ನಡುವೆ ಇತರರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ತಮ್ಮ ಗುರುಗಳ ಜೊತೆಗೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರದ ಶಾಲೆಗಳಿಗೆ ತೆರಳಿ ಕರಾಟೆ ಕ್ಲಾಸ್ ನಡೆಸುವ ಮೂಲಕ ಮತ್ತಷ್ಟು ಜನರನ್ನು ಕರಾಟೆಯಲ್ಲಿ ತರಬೇತುಗೊಳಿಸುತ್ತಿದ್ದಾರೆ.

    ದೇಶ-ವಿದೇಶಗಳಲ್ಲೂ ಸಾಧನೆ: ಕರಾಟೆ ಬಗ್ಗೆ ಅತೀವ ಆಸಕ್ತಿ ಇರುವ ಶಶಾಂಕ್​ ಡಿಪ್ಲೊಮಾ ಇನ್ ಮಾರ್ಷಲ್ ಆರ್ಟ್ಸ್​ ವ್ಯಾಸಂಗ ಮಾಡಿದ್ದಾರೆ. ರಾಜ್ಯದ ಹಲವಾರು ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಇವರು ದೇಶ-ವಿದೇಶಗಳಲ್ಲೂ ತಮ್ಮ ಸಾಧನೆ ಮೆರೆದಿದ್ದಾರೆ. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯೊಂದರಲ್ಲಿ ಕಂಚಿನ ಪದಕ ಪಡೆದಿರುವ ಇವರು, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

    ಚಾಯ್​ವಾಲಾ, ಶಿಕ್ಷಕ-ಸಾಧಕ: ಕರಾಟೆಯಲ್ಲಿ ಸಾಧನೆ ಮಾಡಿರುವ ಶಶಾಂಕ್​ ಅದನ್ನು ಕಲಿಸುವ ಗುರುವೂ ಹೌದು. ಮತ್ತೊಂದೆಡೆ ಇವರು ಚಾಯ್​ವಾಲಾ ಆಗಿಯೂ ಶ್ರಮಿಸುತ್ತಿದ್ದಾರೆ. ಇವರ ತಂದೆ ಇತ್ತೀಚೆಗೆ ಸ್ವಲ್ಪ ಅನಾರೋಗ್ಯಕ್ಕೆ ಒಳಗಾದ್ದರಿಂದ ಅವರ ಕೆಲಸದ ಜವಾಬ್ದಾರಿಯನ್ನೂ ತಮ್ಮ ಹೆಗಲಿಗೆ ಏರಿಸಿಕೊಂಡಿದ್ದಾರೆ ಶಶಾಂಕ್​. ‘ನಮ್ಮ ತಂದೆ ಮಂಡ್ಯದ ಮಾರುಕಟ್ಟೆಯಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದಾರೆ. ಅವರಿಗೆ ಇತ್ತೀಚೆಗೆ ಅನಾರೋಗ್ಯ ಉಂಟಾದ್ದರಿಂದ ಬೆಳಗ್ಗೆ ಹೊತ್ತು ನಾನೇ ಹೋಗಿ ಅಂಗಡಿ ತೆರೆಯುತ್ತೇನೆ. ಬೆಳಗ್ಗಿನ ಜಾವ ಮೂರು ಗಂಟೆಗೆ ಎದ್ದುಕೊಂಡು ಅಂಗಡಿಗೆ ಹೋಗಿ ಐದೂವರೆಯವರೆಗೂ ನಾನೇ ಅಲ್ಲಿ ವ್ಯಾಪಾರ ಮಾಡುತ್ತೇನೆ. ನಂತರ ತಂದೆ ಅಥವಾ ತಮ್ಮ ಬರುತ್ತಾರೆ, ನಾನು ಕರಾಟೆ ಅಭ್ಯಾಸಕ್ಕೆ ಹಾಗೂ ಕಲಿಸಲು ಹೋಗುತ್ತೇನೆ. ಬಳಿಕ ಮತ್ತೆ 9 ಗಂಟೆ ಹಾಗೆ ಪುನಃ ಅಂಗಡಿಗೆ ಬಂದು ವ್ಯಾಪಾರದಲ್ಲಿ ತೊಡಗುತ್ತೇನೆ. ಬೆಳಗ್ಗೆ ಬೇಗ ಏಳುವುದರಿಂದ ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಮಲಗುತ್ತೇನೆ. ನಂತರ ಸಂಜೆ 4 ಗಂಟೆಯಿಂದ 8.30ರ ವರೆಗೆ ಮತ್ತೆ ಕರಾಟೆ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ’ ಎಂದು ತಮ್ಮ ದಿನಚರಿಯನ್ನು ವಿವರಿಸಿದ್ದಾರೆ ಶಶಾಂಕ್​.

    ಮಂಡ್ಯ ಹಳೇಪಟ್ಟಣದ ಬಜಾರ್ ಸ್ಟ್ರೀಟ್​ನ ಕೆಂಪೇಗೌಡ ಬೀದಿಯಲ್ಲಿನ ಕೆ.ರಾಜು ಹಾಗೂ ವರಲಕ್ಷ್ಮೀ ದಂಪತಿಯ ಪುತ್ರ ಶಶಾಂಕ್. ಈ ಬೀದಿಗೆ ಗಾಣಿಗರಬೀದಿ ಎಂದೂ ಕರೆಯಲಾಗುತ್ತಿದೆ. ಗಾಣಿಗ ಸಮಾಜದ ಈ ಪ್ರತಿಭಾವಂತ ಯುವಕನಿಗೆ ‘ಗ್ಲೋಬಲ್ ಗಾಣಿಗ.ಕಾಮ್’ ಅಭಿನಂದನೆಗಳನ್ನು ತಿಳಿಸುವ ಜೊತೆಗೆ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭಾಶಯವನ್ನೂ ಕೋರುತ್ತಿದೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.  
    ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್​ಆ್ಯಪ್​ ಮಾಡಿ.
    

    ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವನಾಥ್‌ಗೆ ಮತ್ತೆ 3 ಚಿನ್ನದ ಪದಕ

    ತನ್ನದೇ ದಾಖಲೆ ಮುರಿದು ಮತ್ತೊಂದು ದಾಖಲೆ ಸೃಷ್ಟಿಸಿದ ವಿಶ್ವನಾಥ ಭಾಸ್ಕರ ಗಾಣಿಗ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!