Friday, May 17, 2024
spot_img
More

    Latest Posts

    ದುರ್ಜನರಿಗೆ ದುಃಸ್ವಪ್ನವಾಗಿರುವ ಸಜ್ಜನರ್; ಅಂತಾರಾಜ್ಯ ಮಟ್ಟದ ಬೃಹತ್ ವಂಚನಾ ಜಾಲ ಭೇದಿಸಿದ ತೆಲಂಗಾಣ ಪೊಲೀಸ್

    ಬೆಂಗಳೂರು: ಒಂದರ ಹಿಂದೊಂದರಂತೆ ಅಂತಾರಾಜ್ಯ ಮಟ್ಟದ ದೊಡ್ಡ ದೊಡ್ಡ ವಂಚನಾ ಜಾಲಗಳನ್ನು ಭೇದಿಸುತ್ತಿರುವ ಸೈಬರಾಬಾದ್ ಪೊಲೀಸರು ವಂಚಕರ ನಿದ್ದೆಗೆಡುವಂತೆ ಮಾಡುತ್ತಿದ್ದಾರೆ. ತಮ್ಮ ಸಮರ್ಥ ಪೊಲೀಸ್ ಪಡೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಭಾರಿ ಪ್ರಕರಣಗಳನ್ನು ಬಯಲಿಗೆಳೆದು ಆರೋಪಿಗಳ ಹೆಡೆಮುರಿ ಕಟ್ಟುತ್ತಿರುವ ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಈ ಮೂಲಕ ದುರ್ಜನರ ಪಾಲಿಗೆ ದುಃಸ್ವಪ್ನದ ರೀತಿಯಲ್ಲಿ ಕಾಡುತ್ತಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ.

    ಹಲವಾರು ರಾಜ್ಯಗಳಲ್ಲಿ 10 ಲಕ್ಷ ಮಂದಿಗೆ ಒಟ್ಟು 1,500 ಕೋಟಿ ರೂಪಾಯಿ ವಂಚನೆ ಮಾಡಿರುವ ಬೆಂಗಳೂರು ಮೂಲದ ಕಂಪನಿಯ ಮೋಸದ ಜಾಲದ ಜಾಡು ಹಿಡಿದ ತೆಲಂಗಾಣ ಪೊಲೀಸರು, ಕಂಪನಿಯ ಮುಖ್ಯಸ್ಥರು ಸೇರಿ 24 ಆರೋಪಿಗಳನ್ನು ಬಂಧಿಸಿದ್ದಾರೆ. ಮಾತ್ರವಲ್ಲ, 20 ಕೋಟಿ ರೂಪಾಯಿ ಹೊಂದಿರುವ ಬ್ಯಾಂಕ್ ಖಾತೆಯೊಂದನ್ನು ಕೂಡ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈಗಾಗಲೇ ಸಿಕ್ಕಿಬಿದ್ದಿರುವ 24 ಆರೋಪಿಗಳು ನಿದ್ರೆ ಅದಾಗಲೇ ಕೆಟ್ಟುಹೋಗಿದ್ದರೆ, ಇನ್ನು ಈ ಚೈನ್ ಲಿಂಕ್ ಮೋಸದ ಜಾಲದಲ್ಲಿ ಕೈಜೋಡಿಸಿರುವ ಇತರ ಆರೋಪಿಗಳಿಗೂ ನಿದ್ರೆ ಕೆಡುವಂತೆ ಮಾಡಿದೆ ಸಜ್ಜನರ್ ನೇತೃತ್ವದ ಪೊಲೀಸ್ ಪಡೆ.

    ವಂಚಕ ಕಂಪನಿ ಬಗ್ಗೆ ವಿವರಿಸುತ್ತಿರುವ ವಿ.ಸಿ. ಸಜ್ಜನರ್

    ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಇಂಡಸ್​ ವಿವ ಹೆಲ್ತ್​ ಸೈನ್ಸಸ್​ ಪ್ರೈವೇಟ್​ ಲಿಮಿಟೆಡ್​’ ಇಂಥದ್ದೊಂದು ಬೃಹತ್ ವಂಚನಾ ಜಾಲವನ್ನು ಹೊಂದಿದ್ದು, ಲಕ್ಷಾಂತರ ಮಂದಿಗೆ ಒಟ್ಟು ಸಾವಿರಾರು ಕೋಟಿ ರೂಪಾಯಿ ಮೋಸ ಮಾಡಿದೆ. ‘ಇಂಡಸ್​ ವಿವ’ ಎಂದು ಚಿಕ್ಕದಾಗಿ ಕರೆಸಿಕೊಳ್ಳುವ ಈ ಕಂಪನಿಯ ಸಿಇಒ, ಬೆಂಗಳೂರಿನ ಅಭಿಲಾಷ್ ಥಾಮಸ್​, ಸಿಒಒ ಬೆಂಗಳೂರಿನ ಜಯನಗರದ ಪ್ರೇಮ್​ ಕುಮಾರ್, ನಿರ್ದೇಶಕ ಬೆಂಗಳೂರಿನ ಬಾಬಾ ನಗರದ ಮಂಡಲನೇನ್​ ಸುಬ್ರಹ್ಮಣ್ಯಂ, ಉಪಾಧ್ಯಕ್ಷ ಬೆಂಗಳೂರಿನ ಆರ್​.ಟಿ.ನಗರದ ಇಮಾದುಲ್ಲಾ ಷರೀಫ್ ಸೇರಿ ಬೇರೆ ರಾಜ್ಯಗಳಲ್ಲಿ ಇರುವ ಈ ಕಂಪನಿಯ ಇತರ ಪದಾಧಿಕಾರಿಗಳನ್ನೂ ಒಳಗೊಂಡಂತೆ ಒಟ್ಟು 24 ಆರೋಪಿಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

    ವಂಚನಾ ಜಾಲ ಪತ್ತೆ, ಆರೋಪಿಗಳ ಬಂಧನ ಕುರಿತ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್

    ‘ಇಂಡಸ್​ ವಿವ’ದಲ್ಲಿ ಹಣ ತೊಡಗಿಸಿ ವಂಚನಾ ಜಾಲದಲ್ಲಿ ಸಿಲುಕಿರುವ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಫೆ.20ರಂದು ತೆಲಂಗಾಣದ ಗಚಿಬೌಲಿ ಪೊಲೀಸ್​ ಠಾಣೆಗೆ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಿಳಿದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ತೆಲಂಗಾಣ ಪೊಲೀಸರು ಮೋಸ ಹೋಗಿರುವವರ ಪಾಲಿಗೆ ಒಂದು ಭರವಸೆ ಮೂಡಿಸಿದ್ದರೆ, ಇನ್ನು ಈ ವಂಚನಾ ಜಾಲದಿಂದ ಮತ್ತಷ್ಟು ಮೋಸ ನಡೆದು ಜನರು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸುವ ಮೂಲಕ ನಿರಾಳತೆಯನ್ನೂ ಮೂಡಿಸಿದ್ದಾರೆ.

    ಬೋನಸ್ ಆಮಿಷ: ಈ ಕಂಪನಿಯು ಸಾರ್ವಜನಿಕರಿಗೆ ಬೋನಸ್ ಹಾಗೂ ಅಧಿಕ ಲಾಭದ ಆಮಿಷವೊಡ್ಡಿ ಸದಸ್ಯರನ್ನಾಗಿ ಮಾಡಿಸಿಕೊಳ್ಳುತ್ತದೆ. ಸದಸ್ಯತ್ವ ಶುಲ್ಕದ ಹೆಸರಿನಲ್ಲಿ ಒಬ್ಬರಿಂದ 12,500 ರೂ. ಪಡೆಯುವ ಈ ಕಂಪನಿ, ತನ್ನದೇ ಆದ ಒಂದಷ್ಟು ಉತ್ಪನ್ನಗಳನ್ನು ಕೂಡ ನೀಡುತ್ತದೆ. ಹಾಗೆ ಸದಸ್ಯರಾದ ವ್ಯಕ್ತಿ ತಲಾ ಅಷ್ಟೇ ಮೊತ್ತ ಪಡೆದು ಮತ್ತಿಬ್ಬರು ಸದಸ್ಯರನ್ನು ಮಾಡಿಸಿದರೆ 1 ಸಾವಿರ ರೂ. ಬೋನಸ್ ಹಾಗೂ ಅದಾಗಿ ಒಂದು ವಾರದೊಳಗೆ ಮತ್ತಿಬ್ಬರು ಸದಸ್ಯರನ್ನು ಮಾಡಿಸಿದರೆ ಮತ್ತೆ 1 ಸಾವಿರ ಬೋನಸ್ ಸೇರಿ ಒಟ್ಟಿಗೇ 2 ಸಾವಿರ ರೂ. ಬೋನಸ್ ಕೊಡುವುದಾಗಿ ಒಬ್ಬರಿಂದ ನಾಲ್ಕು ಸದಸ್ಯರನ್ನು ಮಾಡಿಸಿಕೊಳ್ಳುತ್ತದೆ. ಹೀಗೆ ಸದಸ್ಯರ ಚೈನ್ ಲಿಂಕ್ ಸೃಷ್ಟಿಸಿಕೊಳ್ಳುವ ಕಂಪನಿ ದೊಡ್ಡ ಮಟ್ಟದಲ್ಲೇ ಮೋಸ ಮಾಡಿದೆ. 12,500 ಮಾತ್ರವಲ್ಲದೆ ಇನ್ನೂ ಹೆಚ್ಚಿನ ಮೊತ್ತದ ನಾನಾ ಹಂತದ ಸದಸ್ಯತ್ವ ನೀಡಿ ದೊಡ್ಡ ಮೊತ್ತವನ್ನೇ ಕಬಳಿಸಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿರುವುದಾಗಿ ಕಮಿಷನರ್ ಸಜ್ಜನರ್ ತಿಳಿಸಿದ್ದಾರೆ.

    ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದ ಸೈಬರಾಬಾದ್ ಪೊಲೀಸ್ ತಂಡ

    ಸದಸ್ಯರಿಗೆ ಉತ್ಪನ್ನಗಳನ್ನು ನೀಡುವ ಈ ಕಂಪನಿ, ಅವುಗಳ ಉತ್ಪಾದನೆಗೆಂದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ‘ಆಲಿವ್ ಲೈಫ್​ ಸೈನ್ಸಸ್​’ ಎಂಬ ಘಟಕವನ್ನು ಕೂಡ ಸ್ಥಾಪಿಸಿಕೊಂಡಿದೆ. ಈ ಘಟಕದಲ್ಲಿ ಆರೋಗ್ಯ, ಸೌಂದರ್ಯ ಹಾಗೂ ಪಥ್ಯ ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಐ-ಗ್ಲೋ, ಐ-ಕೇರ್, ಐ-ಚಾರ್ಜ್, ಐ-ಕಾಫಿ, ಐ-ಪಲ್ಸ್, ಅಡ್ವಾನ್ಸ್ ಆಯುರ್ವೇದ, ಐ-ಸ್ಲಿಮ್​ ಮುಂತಾದ ಹೆಸರಿನ ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುತ್ತಿದ್ದು, ಒಂದೊಂದರ ಪೊಟ್ಟಣದ ಮೌಲ್ಯವೇ 3ರಿಂದ 4 ಸಾವಿರ ರೂಪಾಯಿ ಇದೆ. ಆದರೆ ಈ ಘಟಕ ಯಾವುದೇ ಪರವಾನಗಿ ಹೊಂದಿರದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವುದು ಕೂಡ ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ.

    ಸಂಬಂಧಿತ ಸುದ್ದಿ: ಮೆಚ್ಚುಗೆ ಗಳಿಸಿದೆ ತೆಲಂಗಾಣದಲ್ಲಿರುವ ಈ ‘ಸಜ್ಜನರ’ ಸಜ್ಜನಿಕೆ… 

    ಸಂಬಂಧಿತ ಸುದ್ದಿ: ಶಾಸಕರ ಆರೋಪಕ್ಕೆ ಪೊಲೀಸ್ ಕಮಿಷನರ್ ಖಡಕ್ ಎದಿರೇಟು 

    ಸಂಬಂಧಿತ ಸುದ್ದಿ: ಸೈಬರಾಬಾದ್ ಪೊಲೀಸ್ ಕಮಿಷನರ್ ಸಜ್ಜನರ್‌ಗೆ ಸಚಿವರಿಂದ ಸನ್ಮಾನ 

    ಸಂಬಂಧಿತ ಸುದ್ದಿ: ಆರ್ಥಿಕ ವಂಚನೆಗೀಡಾಗಿದ್ದೀರಾ? ಆ್ಯಪ್‌ ಮೂಲಕ ಸಾಲ ತಗೋತೀರಾ? ಹಾಗಿದ್ರೆ ಪೊಲೀಸ್ ಕಮಿಷನರ್ ಸಲಹೆ ಪಡೆಯಬಹುದು.. 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!