Friday, May 17, 2024
spot_img
More
    Home Blog Page 3

    ಸೀರೆ ಓಟದಲ್ಲಿ ಯುವತಿಯರ ಜೊತೆ ಸ್ಪರ್ಧಿಸಿ ಗೆದ್ದ ಗೃಹಿಣಿ ರೋಹಿಣಿ

    0

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಎಂಆರ್ಪಿಎಲ್ ಆಯೋಜಿಸಿದ್ದ ಸೀರೆ ಓಟ (Saree Run)ದ ಮೂರನೇ ಆವೃತ್ತಿಯಲ್ಲಿ ಬಿ. ರೋಹಿಣಿ ತೃತೀಯ ಬಹುಮಾನ ಗಳಿಸಿದ್ದಾರೆ.

    ಮಂಗಳೂರಿನಲ್ಲಿ ಡಿ.17ರಂದು ನಡೆದು ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿರುವ ಈ ಸೀರೆ ಓಟದಲ್ಲಿ ಮಂಗಳೂರು ಪಚ್ಚನಾಡಿಯ ಬಿಕಾಂ ವಿದ್ಯಾರ್ಥಿನಿ ಸ್ವರ್ಣ ಪ್ರಥಮ, ಗದಗ ಮೂಲದ 9ನೇ ತರಗತಿಯ ವಿದ್ಯಾರ್ಥಿನಿ ಕಾವೇರಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಗೃಹಿಣಿ ರೋಹಿಣಿ ಈ ಇಬ್ಬರು ವಿದ್ಯಾರ್ಥಿನಿಯರಿಗೆ ಪೈಪೋಟಿ ಒಡ್ಡಿ ಮೂರು ಕಿ.ಮೀ. ಸೀರೆ ಓಟದ ಈ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ.

    ಮಕ್ಕಳೊಂದಿಗೆ ರೋಹಿಣಿ

    ಬಂಟ್ವಾಳ ತಾಲೂಕು ಪೆರ್ನೆಯ ಚೆನ್ನಪ್ಪ ಸಫಲ್ಯ ಅವರ ಪುತ್ರಿ, ಬರಿಮಾರು ಅಶೋಕ್ ಕುಮಾರ್ ಅವರ ಪತ್ನಿ ಬಿ. ರೋಹಿಣಿ ವೃತ್ತಿಯಿಂದ ದೈಹಿಕ ಶಿಕ್ಷಕಿ. ಶಾಲಾ ದಿನಗಳಿಂದಲೂ ಇವರು ಆಟೋಟಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಕಾಲೇಜಿನಲ್ಲಿದ್ದಾಗ ಅಥ್ಲೀಟ್ ಆಗಿದ್ದಾಗ ಕ್ರಾಸ್ ಕಂಟ್ರಿ ಓಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಸದ್ಯ ಇವರು ಮೊಂಟೆಪದವು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರೇಡ್ 1 ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪುತ್ರಿಯರೂ ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದಾರೆ.

    ಪ್ರಥಮ-ದ್ವಿತೀಯ ಬಹುಮಾನ ವಿಜೇತ ವಿದ್ಯಾರ್ಥಿನಿಯರೊಂದಿಗೆ ತೃತೀಯ ಬಹುಮಾನ ವಿಜೇತ ಶಿಕ್ಷಕಿ ರೋಹಿಣಿ.

    ರೋಹಿಣಿಯವರ ಪುತ್ರಿ ಅನರ್ಘ್ಯ ದೆಹಲಿಯಲ್ಲಿ ನಡೆಯುವ 14 ವರ್ಷದ ಒಳಗಿನ ಈಜು ಸ್ಫರ್ದೆಯಲ್ಲಿ ಎಸ್ಜಿಎಫ್ ಸ್ಫರ್ಧೆಗೆ ಆಯ್ಕೆ ಆಗಿದ್ದಾರೆ. ಇನ್ನೊಬ್ಬ ಪುತ್ರಿ ಅನನ್ಯ ಕಳೆದ ವರ್ಷ ನಡೆದ ರಾಜ್ಯಮಟ್ಟದ ನಾನ್ ಮೆಡಲಿಸ್ಟ್ 9 ವರ್ಷದ ಹುಡುಗಿಯರ ಈಜು ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಛತ್ತೀಸ್‌ಗಢ ಉಪ ಮುಖ್ಯಮಂತ್ರಿ ಆಗಿ ಅರುಣ್‌ ಸಾಹು ಆಯ್ಕೆ

    0

    ಬೆಂಗಳೂರು: ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗಾಣಿಗ (ಸಾಹು) ಸಮುದಾಯದ 12 ಮಂದಿ ಗೆದ್ದು ಶಾಸಕರಾಗಿದ್ದು, ಆ ಪೈಕಿ ಅರುಣ್‌ ಸಾಹು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಒಲಿದಿದೆ.

    ಛತ್ತೀಸ್‌ಗಢ ಮುಖ್ಯಮಂತ್ರಿ ಆಗಿ ವಿಷ್ಣುದೇವ ಸಾಯಿ ಪ್ರಮಾಣವಚನ ಸ್ವೀಕರಿಸಿದ್ದು, ಅವರೊಂದಿಗೆ ಉಪ ಮುಖ್ಯಮಂತ್ರಿಗಳಾಗಿ ಅರುಣ್‌ ಸಾಹು ಹಾಗೂ ವಿಜಯ್‌ ಶರ್ಮಾ ಕೂಡ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

    ಪ್ರಮಾಣವಚನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ವಿಷ್ಣುದೇವ ಸಾಯಿ, ಡಿಸಿಎಂ ವಿಜಯ್‌ ಶರ್ಮಾ ಜೊತೆ ಅರುಣ್‌ ಸಾಹು.

    ಯಾರಿವರು ಅರುಣ್‌ ಸಾಹು?

    ಅರುಣ್ ಸಾಹು ಅವರು ಸಾಹು(ತೇಲಿ) ಸಮುದಾಯದವರಾಗಿದ್ದು, ಇವರು ಆರ್‌ಎಸ್‌ಎಸ್‌ ಹಾಗೂ ಎಬಿವಿಪಿ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದ್ದರು. ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ, ಬಳಿಕ 2019ರಲ್ಲಿ ಬಿಲಾಸ್ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಅಟಲ್‌ ಶ್ರೀವಾಸ್ತವ ಅವರನ್ನು 1.4 ಲಕ್ಷ ಮತಗಳಿಂದ ಮಣಿಸಿ ಸಂಸದರಾದರು.

    ನಂತರ ಇವರು 2022ರಲ್ಲಿ ಛತ್ತೀಸ್‌ಗಢ ರಾಜ್ಯ ಬಿಜೆಪಿ ಅಧ್ಯಕ್ಷರಾದರು. ವೃತ್ತಿಯಿಂದ ವಕೀಲರಾಗಿರುವ ಅರುಣ್‌ ಅವರ ಹುಟ್ಟೂರು ಮುಂಗೇಲಿ. ಇವರು ಆರ್‌ಎಸ್‌ಎಸ್‌ ಮುಖಂಡ ಅಭಿರಾಂ ಸಾಹು ಅವರ ಪುತ್ರ. ಅರುಣ್ ಛತ್ತೀಸ್‌ಗಢ ಹೈಕೋರ್ಟ್‌ನಲ್ಲಿ ಡೆಪ್ಯುಟಿ ಅಡ್ವೊಕೇಟ್‌ ಜನರಲ್‌ ಆಗಿದ್ದರು. ಈ ವಿಧಾನಸಭೆ ಚುನಾವಣೆಯಲ್ಲಿ ಲೊರ್ಮಿ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಥಾಣೇಶ್ವರ್‌ ಸಾಹು ಅವರ ವಿರುದ್ಧ 45 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ರಾಜ್ಯಕ್ಕೆ 21ನೇ ರ‌್ಯಾಂಕ್ ಪಡೆದು ಗ್ರೇಡ್‌-1 ಹುದ್ದೆಗೆ ಆಯ್ಕೆಯಾದ ಸಂತೋಷ

    0

    ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಾಡಗಿ ಗ್ರಾಮದ ಸಂತೋಷ ಹನಮಗೌಡ ಹೊನ್ನಳ್ಳಿ ಅವರು ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿರುವ ಪರೀಕ್ಷೆಯಲ್ಲಿ ಪಾಸಾಗಿ ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್‌ ಇಂಜಿನಿಯರ್‌(ಸಿವಿಲ್) ಗ್ರೇಡ್-1 ಹುದ್ದೆಗೆ ರಾಜ್ಯಕ್ಕೆ 21ನೇ ರ‌್ಯಾಂಕ್ ಪಡೆದು ಆಯ್ಕೆ ಆಗಿದ್ದಾರೆ.

    ಇವರು 1ರಿಂದ 10ನೇ ತರಗತಿವರೆಗೆ ಹುನಗುಂದದ ವಿಜಯ ಮಹಾಂತೇಶ ಮಾದರಿಯ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪೂರೈಸಿ, ನಂತರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ನಡೆಸಿ, ಹುಬ್ಬಳ್ಳಿಯ ಬಿವಿಬಿಯಲ್ಲಿ ಸಿವಿಲ್ ಪದವಿ ಮುಗಿಸಿದ್ದಾರೆ. ಸಿವಿಲ್‌ನಲ್ಲಿ ಎರಡು ಬಾರಿ ಗೇಟ್ ಪಾಸ್ ಆಗಿರುವ ಇವರು, ದಕ್ಷಿಣಕನ್ನಡ ಜಿಲ್ಲೆಯ ಸುರತ್ಕಲ್‌ ಎನ್‌ಐಟಿಕೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಚಿತ್ರಗಿ ಶ್ರೀರಾಮಚಂದ್ರ ಮಠದಲ್ಲಿ ಕಾರ್ತಿಕ ದೀಪೋತ್ಸವ

    0

    ಬೆಂಗಳೂರು: ಕುಮಟಾ ಗಾಣಿಗ ಯುವ ಬಳಗವು ಗಾಣಿಗ ಸಮಾಜದ ಪುರಾತನ ದೇವಾಲಯವಾದ ಚಿತ್ರಗಿ ಶ್ರೀ ರಾಮಚಂದ್ರ ಮಠದಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುವ ಕಾರ್ತಿಕ ದೀಪೋತ್ಸವ ಈ ವರ್ಷ ಡಿ.9ರಂದು ಅದ್ಧೂರಿಯಾಗಿ ನೆರವೇರಿತು.

    ಇದು ಇಲ್ಲಿನ ಐದನೇ ವರ್ಷದ ದೀಪೋತ್ಸವವಾಗಿದ್ದು, ಶನಿವಾರ ಸಂಜೆ 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೀಪೋತ್ಸವ ಆರಂಭಗೊಂಡಿತು. ಕುಮಟಾ ಶ್ರೀ ಮಾರುತಿ  ಭಜನಾ ತಂಡದವರಿಂದ  ಭಕ್ತಿ ಸಂಗೀತ ಕಾರ್ಯಕ್ರಮವೂ ನಡೆಯಿತು.

    ದೇವಸ್ಥಾನವು ಆಕರ್ಷಕ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದ್ದಲ್ಲದೆ, ಸಮಾಜ ಬಾಂಧವರು ದೀಪಗಳನ್ನೂ ಬೆಳಗಿ ದೀಪೋತ್ಸವದಲ್ಲಿ ಭಾಗಿಯಾದರು. ಕುಮಟಾ ಗಾಣಿಗ ಬಳಗದ ಪದಾಧಿಕಾರಿಗಳು, ಸದಸ್ಯರು ಮತ್ತು ಸಮಾಜ ಬಾಂಧವರು ಇದರಲ್ಲಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾದರು.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ:ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    ಶ್ರೀವೇಣುಗೋಪಾಲಕಷ್ಣ ಸನ್ನಿಧಿಯಲ್ಲಿ ಅದ್ಧೂರಿ ದೀಪೋತ್ಸವ; ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ

    0

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗರ ಕುಲದೇವರಾದ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಯುವ ಕಾರ್ತಿಕ ದೀಪೋತ್ಸವ ಈ ಸಲ ಡಿ. 5ರಂದು ಅದ್ಧೂರಿಯಾಗಿ ನೆರವೇರಿತು.

    ದೇವಸ್ಥಾನಕ್ಕೆ ಬಂದ ಸಮಾಜಬಾಂಧವರು ಕಾರ್ತಿಕ ದೀಪೋತ್ಸವದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಲ್ಲದೆ, ದೇವಸ್ಥಾನದ ಆವರಣದಲ್ಲಿ ಹಣತೆ-ದೀಪಗಳನ್ನು ಹಚ್ಚುವ ಮೂಲಕ ದೇವಳವನ್ನು ಬೆಳಗಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು. ಸಮಾಜ ಬಾಂಧವರನೇಕರು ತುಪ್ಪದ ದೀಪ ಸೇವೆಯನ್ನೂ ನೀಡಿದರು.

    ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೇದಮೂರ್ತಿ ಶ್ರೀಕಾಂತ ಸಾಮಗರ ಮುಂದಾಳತ್ವದಲ್ಲಿ ನವಕಲಶ ಪ್ರಧಾನ ಹೋಮ, ಪರಿವಾರ ದೇವರಿಗೆ ಕಲಶಾಭಿಷೇಕ, ರಂಗಪೂಜೆ, ದೀಪೋತ್ಸವ, ಮಹಾಮಂಗಳಾರತಿಗಳು ನೆರವೇರಿದವು. ಮಧ್ಯಾಹ್ನ ಅನ್ನಸಂತರ್ಪಣೆ, ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.

    ಪ್ರಸಿದ್ಧ ಯಕ್ಷಗಾನ ಕಲಾವಿದ ಆಜ್ರಿ ಕಾಕೋಡ್‌ಮಕ್ಕಿ ಮಂಜುನಾಥ ಗಾಣಿಗ ಅವರಿಗೆ ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಲ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗ, ಸಮಾಜಸೇವಕರೂ ಆಗಿರುವ ನಿವೃತ್ತ ಪೋಸ್ಟ್‌ ಮಾಸ್ಟರ್‌ ಎಂ. ಲಕ್ಷ್ಮಣ ಗಾಣಿಗ, ರಂಗಭೂಮಿ ಕ್ಷೇತ್ರದ ತಗ್ಗರ್ಸೆ ಗಣೇಶ್‌ ಗಾಣಿಗ, ಕೃಷಿ-ಹೈನುಗಾರಿಕೆ ಕ್ಷೇತ್ರದ ತಗ್ಗರ್ಸೆ ರಂಗ ಗಾಣಿಗ, ಚಿತ್ರಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್‌ ಗಾಣಿಗ, ಮುಖ್ಯಮಂತ್ರಿ ಪದಕ ಪುರಸ್ಕೃತ ಅಗ್ನಿಶಾಮಕ ದಳದ ಅಧಿಕಾರಿ ಬಡಾನಿಡಿಯೂರು ಸುಧೀರ್‌ ಗಾಣಿಗ ಅವರನ್ನು ಸನ್ಮಾನಿಸಲಾಯಿತು.

    ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ, ಉಪಾಧ್ಯಕ್ಷರಾದ ಕೆ.ಉದಯಕುಮಾರ್‌, ಶೇವಧಿ ಸುರೇಶ ಗಾಣಿಗ, ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಸಾಲಿಗ್ರಾಮ, ಕೋಶಾಧಿಕಾರಿ ಗುರುರಾಜ ಕೆಮ್ಮಣ್ಣು, ಸಂಘದ ಮಾಜಿ ಅಧ್ಯಕ್ಷರಾದ ಕೆ.ಗೋಪಾಲ್‌, ವಾಸುದೇವ ಬೈಕಾಡಿ, ಶ್ರೀವೇಣುಗೋಪಾಲಕೃಷ್ಣ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ರಾಜೇಂದ್ರ ಕೃಷ್ಣ ಗಾಣಿಗ, ಶ್ರೀ ಗೋಪಾಲಕೃಷ್ಣ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಗಾಣಿಗ ಕೊಲ್ಲೂರು, ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್‌.ಟಿ.ನರಸಿಂಹ, ಬೆಂಗಳೂರಿನ ಶ್ರೀ ವೇಣುಗೋಪಾಲಕೃಷ್ಣ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ, ಪತ್ರಕರ್ತ ರಾಜೇಶ್‌ ಗಾಣಿಗ ಅಚ್ಲಾಡಿ ಮುಂತಾದವರು ಉಪಸ್ಥಿತರಿದ್ದರು.

    (ಚಿತ್ರಕೃಪೆ: ಐಶ್ವರ್ಯ ಬೀಜಾಡಿ ಫೋಟೋಗ್ರಫಿ)

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್‌ ಪದವಿ

    0

    ಬೆಂಗಳೂರು: ಗಾಣಿಗ ಸಮುದಾಯದ ಯುವತಿಯೊಬ್ಬರು ಗಾಣಿಗ ಸಮಾಜದ ಕುರಿತಾಗಿಯೇ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್‌ ಪದವಿ ಗಳಿಸಿದ್ದಾರೆ.

    ವಿಜಯಪುರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ಜಿ.ಮೇಘನಾ ಡಾಕ್ಟರೇಟ್‌ ಪಡೆದವರು. ಗಾಣಿಗರಾದ ವೀರೇಶ್‌-ಶಾಂತವೀರಮ್ಮ ದಂಪತಿಯ ಪುತ್ರಿ ಡಾ.ಮೇಘನಾ ಆರಂಭದಿಂದಲೂ ಕಷ್ಟಗಳ ನಡುವೆಯೇ ಸಾಧಿಸುತ್ತಲೇ ಬಂದಿರುವ ಸಾಧಕಿ.

    ಪ್ರತಿಭಾವಂತ ವಿದ್ಯಾರ್ಥಿನಿ ಆಗಿರುವ ಇವರು ತಂದೆಯ ನಿಧನದ ನಂತರ ಕಾಟ್ರಹಳ್ಳಿಯ ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದರು. ಜುಮ್ಮೋಬನಹಳ್ಳಿ ಕುಗ್ರಾಮದಲ್ಲಿ ಅಷ್ಟೊಂದು ಶೈಕ್ಷಣಿಕ ವಾತಾವರಣ ಇರಲಿಲ್ಲ. ಅದಾಗ್ಯೂ, ಇವರಲ್ಲಿರುವ ಓದಬೇಕೆಂಬ ಆಸೆ, ಸಾಧಿಸಬೇಕೆಂಬ ಛಲ ಇಷ್ಟೊಂದು ಎತ್ತರಕ್ಕೆ ಕರೆತಂದಿದೆ.

    ಪ್ರಾಥಮಿಕ ಶಿಕ್ಷಣವನ್ನು ಕೂಡ್ಲಿಗಿ ತಾಲೂಕಿನ ಕಾಟ್ರಹಳ್ಳಿ ಗ್ರಾಮದಲ್ಲಿ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ನರಸಿಂಹನಗಿರಿಯಲ್ಲಿ ನಿತ್ಯ 2 ಕಿ.ಮೀ. ನಡೆದುಕೊಂಡು ಹೋಗಿ ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. 

    ಪಿಯುಸಿಯನ್ನು ಕೂಡ್ಲಿಗಿಯ ಹಿರೇಮಠ ಪದವಿಪೂರ್ವ ಕಾಲೇಜಿನಲ್ಲಿ  ಮುಗಿಸಿದರು. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಮೂರು ವರ್ಷ ಅಕ್ಕನ ಮನೆಯಲ್ಲಿದ್ದುಕೊಂಡು ಬಿ.ಎ. ಪದವಿಯನ್ನು ಡಿಸ್ಟಿಂಕ್ಷನ್‌ನೊಂದಿಗೆ ಪಾಸಾದರು. ಎಂ.ಎ. ಪದವಿಯನ್ನು ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನದ ಸಂಶೋಧನಾ ವಿಭಾಗದಲ್ಲಿ ಪ್ರಥಮ ರ‌್ಯಾಂಕ್‌ನೊಂದಿಗೆ ತೇರ್ಗಡೆಯಾದರು.  

    ನಂತರ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ, ಹಿರಿಯ ಪ್ರಾಧ್ಯಾಪಕಿ ಪ್ರೊ.ಕೆ.ಎಂ. ಮೇತ್ರಿ ಅವರ ಮಾರ್ಗದರ್ಶನದಲ್ಲಿ ಮೇಘನಾ ಮಂಡಿಸಿದ “ಗಾಣಿಗ ಸಮುದಾಯದ ಸಮಾಜೋ-ಆರ್ಥಿಕ ಸ್ಥಿತಿಗತಿ” ಎಂಬ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ.

    ( ಮಾಹಿತಿಕೃಪೆ: ರಾಮಚಂದ್ರ ಎಸ್. ಯರಗಲ್ಲ, ಬೆಂಗಳೂರು )

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಇಲ್ಲಿದೆ ಮನೆ ಬಾಗಿಲಿಗೇ ಗಾಣದ ಎಣ್ಣೆ ಕಳುಹಿಸಿಕೊಡುವ ವ್ಯವಸ್ಥೆ

    0

    ಬೆಂಗಳೂರು: ಆಧುನಿಕ ಜೀವನಶೈಲಿಯಿಂದ ಜನರಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾದ ಬಳಿಕ ಗಾಣದಿಂದ ತಯಾರಿಸಿದ ಎಣ್ಣೆಗೆ ಬೇಡಿಕೆ ಹೆಚ್ಚಾಗಿದೆ.

    ಯತೀಶ್‌ ಗಾಣಿಗ ಎಂಬವರು ದಿಯಾ ಹೋಮ್‌ಕಾರ್ಟ್‌ ಸರ್ವಿಸ್‌ ಪ್ರೈ.ಲಿ. ಎಂಬ ಸಂಸ್ಥೆ ಸ್ಥಾಪಿಸಿ ಗಾಣದಿಂದ ತಯಾರಿಸಿದ ಕಡಲೆಕಾಯಿ ಎಣ್ಣೆಯನ್ನು ಮನೆ ಬಾಗಿಲಿಗೇ ಕಳುಹಿಸಿಕೊಡುವ ವ್ಯವಸ್ಥೆ ಆರಂಭಿಸಿದ್ದಾರೆ. ಗಾಣಿಗರೇ ಗಾಣದಲ್ಲಿ ತಯಾರಿಸಿದ ಈ ಎಣ್ಣೆಯ ಹೋಮ್‌ ಡೆಲಿವರಿ ಡಿ. 3ರಿಂದ ಆರಂಭಿಸಲಾಗಿದೆ.

    ಮೊದಲನೇ ಗ್ರಾಹಕರಾಗಿ ಪಾರ್ಸೆಲ್‌ ಸ್ವೀಕರಿಸಿದ ವೆಂಕಟೇಶ್‌ ಗಾಣಿಗ

    ಸದ್ಯಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಇರುವವರಿಗೆ ಮಾತ್ರ ಇದನ್ನು ಮನೆ ಬಾಗಿಲಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಲೀಟರ್‌ಗೆ 260 ರೂ. ಬೆಲೆಯ ಈ ಕಡಲೆಕಾಯಿ ಎಣ್ಣೆ ಬೇಕಾದವರು 8792210666 ಸಂಪರ್ಕಿಸಬಹುದು.

    ಮುಂದೆ ಕರ್ನಾಟಕದ ಇತರ ಭಾಗಗಳಿಗೂ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ರಾಷ್ಟ್ರೀಯ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವನಾಥ್‌ಗೆ ಬೆಳ್ಳಿ ಪದಕ

    ರಾಷ್ಟ್ರೀಯ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವನಾಥ್‌ಗೆ ಬೆಳ್ಳಿ ಪದಕ

    0

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಬೆಂಚ್‌ಪ್ರೆಸ್‌ ಚಾಂಪಿಯನ್​ಶಿಪ್​ನಲ್ಲಿ ವಿಶ್ವನಾಥ ಭಾಸ್ಕರ್ ಗಾಣಿಗ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಇವರು 93 ಕೆ.ಜಿ. ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು.  

    ಮಧ್ಯಪ್ರದೇಶವನ್ನು ಪ್ರತಿನಿಧಿಸಿದ್ದ ವೇದ್‌ ಪ್ರಕಾಶ್‌ ಪ್ರಥಮ, ಹಾಗೂ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದ್ದ ಚಂದನ್‌ ಬಲ್ಲವ್‌ ಮೂರನೇ ಸ್ಥಾನ ಗಳಿಸಿದ್ದಾರೆ.   ದೇವಿಕಾ ದೇಸಾಯಿ 84+ ಕೆ.ಜಿ. ಸಬ್ ಜೂನಿಯರ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದರು. ದಿಶಾ ಮೋಹನ್ 57 ಕೆ.ಜಿ. ಸಬ್ ಜೂನಿಯರ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರಿಬ್ಬರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.  

    ವಿಶ್ವನಾಥ್‌ ಭಾಸ್ಕರ್‌ ಗಾಣಿಗ, ವೇದ್‌ ಪ್ರಕಾಶ, ಚಂದನ್‌ ಬಲ್ಲವ್
    ಕೋಚ್ ವಿಶ್ವನಾಥ್‌ ಜೊತೆ ದಿಶಾ ಮೋಹನ್‌
    ಕೋಚ್‌ ವಿಶ್ವನಾಥ್‌ ಜೊತೆ ಕಿರಣ್

    ಪೂನಂ 69 ಕೆ.ಜಿ. ಮಾಸ್ಟರ್ 1 ವಿಭಾಗದಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿ ಬೆಳ್ಳಿಪದಕ ಪಡೆದಿದ್ದಾರೆ. ಇವರು ವಿಶ್ವನಾಥ್‌ ಅವರ ಬಾಲಾರ್ಕ ಫಿಟ್ನೆಸ್ ಸೆಂಟರ್​ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಿರಣ್ 52 ಕೆ.ಜಿ. ಸೀನಿಯರ್ ವಿಭಾಗದಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದಿರುತ್ತಾರೆ. ಇವರು ವಿಶ್ವನಾಥ್‌ ಬಳಿ ಆನ್‌ಲೈನ್‌ ತರಬೇತಿ ಪಡೆದಿದ್ದರು.

    ಕೋಚ್‌ ವಿಶ್ವನಾಥ್‌ ಜೊತೆ‌ ಪೂನಂ
    ಕೋಚ್‌ ವಿಶ್ವನಾಥ್‌ ಜೊತೆ ದೇವಿಕಾ ದೇಸಾಯಿ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    0

    ಬೆಂಗಳೂರು: ದೇಶದಲ್ಲಿ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳ ಮತ ಎಣಿಕೆ ನಿನ್ನೆ ನಡೆದಿದ್ದು, ಫಲಿತಾಂಶ ಪ್ರಕಟಗೊಂಡಿದೆ.  

    ಈ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಗಾಣಿಗ ಅಭ್ಯರ್ಥಿಗಳು ಗೆದ್ದಿರುವುದು ಸಂತಸದ ಸಂಗತಿ. ಅದರಲ್ಲೂ ಛತ್ತೀಸ್‌ಗಢದಲ್ಲಿ ಬರೋಬ್ಬರಿ ಒಂದು ಡಜನ್‌ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ.  

    ಛತ್ತೀಸ್‌ಗಢದಲ್ಲಿ ಗಾಣಿಗ ಸಮುದಾಯದ 12 ಮಂದಿ ಗೆದ್ದಿದ್ದರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ತಲಾ ಒಬ್ಬರು ಗೆದ್ದಿದ್ದಾರೆ. ಗೆದ್ದಿರುವ ಎಲ್ಲ ಅಭ್ಯರ್ಥಿಗಳಿಗೆ ಗ್ಲೋಬಲ್‌ ಗಾಣಿಗ.ಕಾಂ ಅಭಿನಂದನೆಗಳನ್ನು ತಿಳಿಸಿ ಶುಭ ಹಾರೈಸುತ್ತಿದೆ.

    ಛತ್ತೀಸ್‌ಗಢದಲ್ಲಿ ಗೆದ್ದವರ ವಿವರ

    • ಅರುಣ್‌ ಸಾಹು: ಲಾರ್ಮಿ ಕ್ಷೇತ್ರ, ಬಿಜೆಪಿ.
    • ಮೋತಿಲಾಲ್‌ ಸಾಹು: ರಾಯ್ಪುರ ಗ್ರಾಮೀಣ, ಬಿಜೆಪಿ.
    • ಇಂದ್ರಕುಮಾರ್‌ ಸಾಹು: ಅಭಂಪುರ್‌, ಬಿಜೆಪಿ
    • ರೋಹಿತ್‌ ಸಾಹು: ರಜೀಂ, ಬಿಜೆಪಿ.
    • ಈಶ್ವರ್‌ ಸಾಹು: ಸಜಾ, ಬಿಜೆಪಿ.
    • ದೀಪೇಶ್‌ ಸಾಹು: ಬೆಮೆತ್ರಾ, ಬಿಜೆಪಿ.
    • ಓಂಕಾರ್‌ಲಾಲ್‌ ಸಾಹು: ಧಮ್ತರಿ, ಬಿಜೆಪಿ.
    • ಬಲೇಶ್ವರ್‌ ಸಾಹು: ಜಯ್ಪುರ, ಕಾಂಗ್ರೆಸ್.
    • ಸಂದೀಪ್‌ ಸಾಹು: ಕಸ್ದೋಳ್‌, ಕಾಂಗ್ರೆಸ್‌.
    • ಇಂದ್ರ ಸಾಹು: ಭಟಪರ, ಕಾಂಗ್ರೆಸ್‌.
    • ಜಲೇಶ್ವರ್‌ ಸಾಹು: ಡೊಂಗರ್‌ಗಾಂವ್‌, ಕಾಂಗ್ರೆಸ್‌.
    • ಭೋಳರಾಂ ಸಾಹು: ಖುಜಿ, ಕಾಂಗ್ರೆಸ್‌  

    ರಾಜಸ್ಥಾನ: ಭೀಮ್‌ರಾಜ್‌ ಭಾಟಿ- ಪಲಿ ಮರ್ವರ್‌, ಕಾಂಗ್ರೆಸ್‌.

    ಮಧ್ಯಪ್ರದೇಶ: ರಾಮ್‌ನಿವಾಸ್‌ ಸಾಹು- ಸಿಂಗ್ರೌಲಿ, ಬಿಜೆಪಿ.  

    ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಗಾಣಿಗ ಸಮುದಾಯ ಈ ಎಲ್ಲ ಅಭ್ಯರ್ಥಿಗಳಿಗೆ ಭಾರತೀಯ ಸಾಹು ಶ್ರೇಷ್ಠಿ ಮಹಾಸಂಘ (ಸಾಹು ಚೌಪಾಲ್‌) ಸಂಸ್ಥಾಪಕ ಉಪಾಧ್ಯಕ್ಷ ಕೃಷ್ಣಕುಮಾರ್‌ ಸಾಹು ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    0

    ಬೆಂಗಳೂರು: ಯಾರು ಏನೇ ಹೇಳಿದರೂ ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೆ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

    ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರಿನ ಅಲಹಳ್ಳಿ ಅಂಜನಾಪುರದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಗಾಣಿಗ ಜನಾಂಗದ ಸಮಾವೇಶ, ನೂತನ  ಕಟ್ಟಡ ಬ್ಲಾಕ್-1 ಉದ್ಘಾಟನೆ ಹಾಗೂ ಬ್ಲಾಕ್ -2 ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮ ನೆರೆವೇರಿಸಿ ಸಿಎಂ ಮಾತನಾಡಿದರು.

    ಸಮಾಜದಲ್ಲಿ ಅವಕಾಶವಂಚಿತ, ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತ, ಸಾಮಾಜಿಕ  ನ್ಯಾಯದಿಂದ ಇಂದಿಗೂ ವಂಚಿತರಾದ ಜನರ ಪರವಾಗಿ ನಾವು ಇರುತ್ತೇವೆ ಎಂದ ಸಿಎಂ, ನಿಮ್ಮೊಂದಿಗೂ ಇರುತ್ತೇವೆ ಎಂದರು.   ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣದ ನಂತರ ಎಣ್ಣೆ ತಯಾರಿಸುವ ವೃತ್ತಿ ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ ಕಡಿಮೆ, ಸಣ್ಣ ರೈತರು ಬಹಳ ಕಡಿಮೆ ಇದ್ದಾರೆ ಎಂದರು.  

    ವಿಶ್ವಕರ್ಮ ಯೋಜನೆಯಡಿ ಗಾಣಿಗರನ್ನು ಬಿಟ್ಟಿದ್ದರ ಬಗ್ಗೆ ಕೇಂದ್ರ  ಸರ್ಕಾರಕ್ಕೆ  ಪತ್ರ ಬರೆಯಲು ಮನವಿ ಮಾಡಿದ್ದಾರೆ. ನಿಮ್ಮ ಸಮಾಜಕ್ಕೆ ಸೇರಿದ ಪ್ರಧಾನಿಗೆ ನಿಮ್ಮ ಸಮಸ್ಯೆ ಗೊತ್ತಿದೆಯೋ ಗೊತ್ತಿಲ್ಲ. ಆದರೆ ನಾನು ಕೂಡಲೇ ಪತ್ರ ಬರೆಯುತ್ತೇನೆ ಎಂದು ಸಿಎಂ ಭರವಸೆ ನೀಡಿದರು.   ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿಗಣತಿ ವರದಿಯನ್ನು   ವೈಜ್ಞಾನಿಕವಾಗಿ ತಯಾರಿಸಿದ್ದು, ಅದನ್ನು ನಾವಿನ್ನೂ ಸ್ವೀಕಾರ ಮಾಡಿಲ್ಲ. ವರದಿಯನ್ನು ಸ್ವೀಕರಿಸಲೆಂದೇ ಆಯೋಗದ ಅವಧಿಯನ್ನು 2 ತಿಂಗಳು ಮುಂದುವರಿಸಲಾಗಿದೆ. ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

    ಗಾಣಿಗರಿಗೆ ಅಧಿಕ ಸಹಾಯ ಗಾಣಿಗರಿಗೆ ಹೆಚ್ಚಿನ ಸಹಾಯ ಮಾಡುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮಗೆ ನ್ಯಾಯ ಕೊಡಿಸಲು ಸದಾ ನಿಮ್ಮೊಂದಿಗೆ ಇರುತ್ತೇನೆ. ಎಲ್ಲ ಜಾತಿಯ ಬಡವರಿಗೆ ಗ್ಯಾರಂಟಿಗಳನ್ನು ಒದಗಿಸಲಾಗಿದೆ ಎಂದರು.   ರಾಜಶೇಖರ್ ಅವರಿಗೆ ಸಹಕಾರ ರತ್ನ ಎಂಬ ಬಿರುದು, ಲಕ್ಷ್ಮೀಪತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಧಾಕೃಷ್ಣ ಅವರಿಗೆ ರಾಜ್ಯ ರೈತ ಪ್ರಶಸ್ತಿ ನೀಡಲಾಗಿದೆ. ಸಾಮಾಜಿಕ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಮುಂದೆಯೂ ಅದನ್ನು ನಾವು ಮುಂದುವರಿಸುತ್ತೇವೆ ಎಂದರು.  

    ವಿ.ಆರ್.ಸುದರ್ಶನ್ ಮತ್ತು ನಾವು ರಾಜಕೀಯವಾಗಿ ಸಾಮಾಜಿಕವಾಗಿ ಒಟ್ಟಿಗೆ ಇದ್ದವರು. ಅವರ ಹಾಗೂ ನಮ್ಮ ಮನಸ್ಥಿತಿ ಒಂದೇ ಇದೆ ಎಂದು ಸಿಎಂ ಹೇಳಿದರು. ಪೂರ್ಣಾನಂದಪುರಿ ಸ್ವಾಮೀಜಿಗಳಾದ ಮೇಲೆ ಇದೇ ಮೊದಲ ಬಾರಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ. ನಾವು ಒಟ್ಟಿಗೆ ಹಿಂದುಳಿದ ಜಾತಿಗಳ ಸಮಸ್ಯೆ  ಕುರಿತು ಚರ್ಚೆ ಮಾಡಿ, ಇತ್ಯರ್ಥ ಮಾಡಲು ಪ್ರಯತ್ನಿಸಿದವರು. ಅವರಿಗೆ ಈ ಸಮಾಜವನ್ನು ಮುನ್ನಡೆಸುವ ಶಕ್ತಿ ಹೆಚ್ಚಲಿ ಎಂದು ಹಾರೈಸಿದರು.  

    ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ಎಂ.ಆರ್. ರಾಜಶೇಖರ್, ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಶಾಸಕಿ ಶಾರದಾ ಮೋ ಹನ್ ಶೆಟ್ಟಿ, ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಡಾ.ವಾಸಂತಿ, ಮೈಸೂರಿನ ಮಾಜಿ ಮೇಯರ್ ಅನಂತ್, ರಮೇಶ್, ಎಂ.ಎಸ್.ಶ್ರೀ ನಿವಾಸಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    error: Content is protected !!